ADVERTISEMENT

ಸಂಘರ್ಷದ ಹಾದಿಯಲ್ಲೇ ರೂಪುಗೊಂಡ ನಾಯಕ ಹೇಮಂತ್‌ ಸೊರೇನ್‌

ಕಾನೂನು ಹೋರಾಟ, ಪಕ್ಷದ ಆಂತರಿಕ ಕಚ್ಚಾಟಕ್ಕೆ ಎದೆಗುಂದದ ಸೊರೇನ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 22:15 IST
Last Updated 23 ನವೆಂಬರ್ 2024, 22:15 IST
ಹೇಮಂತ್‌ ಸೊರೇನ್
ಹೇಮಂತ್‌ ಸೊರೇನ್   

ರಾಂಚಿ: ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಪಟ್ಟ ಏರಲಿರುವ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಅವರ ರಾಜಕೀಯ ಜೀವನ ಸುಲಭವಾಗಿಲ್ಲ. 

ಕಾನೂನು ಹೋರಾಟದಿಂದ ಹಿಡಿದು ಪಕ್ಷದಲ್ಲಿನ ಆಂತರಿಕ ಕಚ್ಚಾಟದವರೆಗೆ ಅಡಿಗಡಿಗೂ ಎದುರಾದ ಸವಾಲುಗಳಿಗೆ ಎದೆಗುಂದದ ಹಾಗೂ ರಾಜಕೀಯದಲ್ಲಿನ ಪ್ರಕ್ಷುಬ್ಧ ಸನ್ನಿವೇಶಗಳನ್ನು ಮೆಟ್ಟಿನಿಂತ ಬುಡಕಟ್ಟು ನಾಯಕ ಎಂದೇ ಗುರುತಿಸಿಕೊಳ್ಳುತ್ತಾರೆ.

49 ವರ್ಷದ ಸೊರೇನ್, ಜಾರ್ಖಂಡ್‌ನ ಅತ್ಯಂತ ಕಿರಿಯ ಮುಖ್ಯಮಂತ್ರಿ. ಹಾಗಂತ ಸುಲಭವಾಗಿ ಸೋಲು ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಪ್ರತಿ ಸಂಘರ್ಷದ ನಡುವೆಯೂ ಪುಟಿದೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ADVERTISEMENT

ಸಣ್ಣ ಪ್ರಾಯದಲ್ಲಿಯೇ ಮುಖ್ಯಮಂತ್ರಿ ಪದವಿಗೇರಿದ ಅವರು, ಬುಡಕಟ್ಟು ಸಮುದಾಯಗಳ ಪಾಲಿನ ಗಟ್ಟಿ ದನಿಯಾಗಿ ಹೊರಹೊಮ್ಮಿದ್ದಾರೆ.  

ಹಜಾರಿಬಾಗ್‌ ಸಮೀಪದ ನೆಮ್ರಾ ಗ್ರಾಮದಲ್ಲಿ 1975ರ ಆಗಸ್ಟ್‌ 10ರಂದು ಜನಿಸಿದ್ದಾರೆ. ಪಟ್ನಾ ಹೈಸ್ಕೂಲ್‌ನಲ್ಲಿ ಇಂಟರ್‌ಮೀಡಿಯೇಟ್‌ ಪೂರೈಸಿದ ಸೊರೇನ್‌, ರಾಂಚಿಯ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪ್ರವೇಶ ಪಡೆದರು. ಶಿಕ್ಷಣ ಪೂರ್ಣಗೊಳಿಸಿಲ್ಲ.

ಜಾರ್ಖಂಡ್‌ ಮುಕ್ತಿ ಮೋರ್ಚಾ(ಜೆಎಂಎಂ) ನಾಯಕರಾದ ತಂದೆ ಶಿಬು ಸೊರೇನ್‌ ಅವರ ಗರಡಿಯಲ್ಲಿ ರಾಜಕೀಯ ಜೀವನದ ಆರಂಭಿಕ ಪಟ್ಟುಗಳನ್ನು ಕಲಿತಿದ್ದಾರೆ.

2009ರಲ್ಲಿ ಅಣ್ಣ ದುರ್ಗ ಅವರು ಅಕಾಲಿಕ ಮರಣ ಹೊಂದಿದ ಕಾರಣ, ಪಕ್ಷದ ನಾಯಕತ್ವ ಹೇಮಂತ್‌ ಅವರ ಹೆಗಲಿಗೆ ಬಿತ್ತು. ಅದೇ ವರ್ಷ ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು.

2010ರಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಅರ್ಜುನ್‌ ಮುಂಡಾ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. 

ಈ ಮೈತ್ರಿ ಸರ್ಕಾರ 2012ರಲ್ಲಿ ಪತನಗೊಂಡ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿತ್ತು. ಈ ಹಿನ್ನಡೆಗೆ ಜಗ್ಗದೇ, ಸೊರೇನ್‌ ಅವರು ಮತ್ತೆ ರಾಜಕೀಯ ಹೋರಾಟ ಮುಂದುವರಿಸಿ, 2013ರಲ್ಲಿ ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರ ಸರ್ಕಾರಕ್ಕೆ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಬೆಂಬಲ ನೀಡಿದ್ದವು.

ಸರ್ಕಾರ ಬಹಳ ದಿನ ಉಳಿಯಲಿಲ್ಲ. 2014ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಸೊರೇನ್‌ ಅವರು ವಿರೋಧ ಪಕ್ಷದ ನಾಯಕರಾದರು.

2016ರಲ್ಲಿ ಇವರ ರಾಜಕೀಯ ಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು. ಬಿಜೆಪಿ ನೇತೃತ್ವದ ಸರ್ಕಾರ, ಛೋಟಾನಾಗ್ಪುರ ಗೇಣಿ ಕಾಯ್ದೆ ಹಾಗೂ ಸಂತಾಲ್ ಪರಗಣ ಗೇಣಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಯಿತು. ಇದನ್ನು ವಿರೋಧಿಸಿ ಸೊರೇನ್‌ ಅವರು ಬೃಹತ್‌ ಪ್ರತಿಭಟನೆ ನಡೆಸಿದರು.

ಬುಡಕಟ್ಟು ಜನರ ಹಕ್ಕುಗಳಿಗಾಗಿ ನಡೆಸಿದ ಈ ಹೋರಾಟದಿಂದಾಗಿ ಸೊರೇನ್‌ ಅವರಿಗೆ ಭಾರಿ ಬೆಂಬಲ ದೊರೆಯಿತಲ್ಲದೇ, 2019ರಲ್ಲಿ ಮುಖ್ಯಮಂತ್ರಿಯಾಗಲು ನೆರವಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.