ADVERTISEMENT

ನ.26ರಂದು ಜಾರ್ಖಂಡ್​ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2024, 10:14 IST
Last Updated 24 ನವೆಂಬರ್ 2024, 10:14 IST
   

ರಾಂಚಿ: ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟವನ್ನು ಗೆಲುವಿನ ದಡ ಮುಟ್ಟಿಸಿರುವ ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್‌ ಅವರು ನ. 28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

ಪ್ರಸ್ತುತ ಉಸ್ತುವಾರಿ ಮುಖ್ಯಮಂತ್ರಿ ಆಗಿರುವ ಸೊರೇನ್‌ ಅವರಿಗೆ ನೂತನ ಸರ್ಕಾರ ರಚಿಸಲು ರಾಜ್ಯಪಾಲರಾದ ಸಂತೋಷ್‌ ಗಂಗಾವರ್ ಅವರು ಆಹ್ವಾನಿಸಿದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹೇಮಂತ್ ಅವರಿಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ರಾಜ್ಯಪಾಲರು ಸೂಚಿಸಿದರು.

ADVERTISEMENT

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವು 56 ಸ್ಥಾನಗಳಿಸಿತ್ತು. ರಾಜ್ಯದಲ್ಲಿ ಸರ್ಕಾರ ರಚನೆಗೆ ಸರಳ ಬಹುಮತವಾಗಿ 42 ಸ್ಥಾನದ ಅಗತ್ಯವಿತ್ತು. 

ಮೈತ್ರಿಕೂಟದ ಭಾಗವಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 34 ಸ್ಥಾನ ಗಳಿಸಿದ್ದರೆ ಕಾಂಗ್ರೆಸ್‌ ಪಕ್ಷ 16, ಆರ್‌ಜೆಡಿ 4 ಮತ್ತು ಸಿಪಿಐ–ಎಂಎಲ್ 2 ಸ್ಥಾನ ಗೆದ್ದುಕೊಂಡಿದ್ದವು.

ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್‌ ಅವರ ಕಿರಿಯ ಪುತ್ರನಾದ ಹೇಮಂತ್ ಸೊರೇನ್‌ ಅವರ ನೇತೃತ್ವದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೇರುವ ಮೂಲಕ ಜೆಎಂಎಂ ರಾಜ್ಯದಲ್ಲಿ ಇತಿಹಾಸವನ್ನು ಸೃಷ್ಟಿಸಿತು. 

ಹೇಮಂತ್ ಸೊರೇನ್ 39,791 ಮತಗಳ ಅಂತರದಿಂದ ಬರ್‌ಹೇಟ್ ಕ್ಷೇತ್ರದಿಂದ, ಅವರ ಪತ್ನಿ ಕಲ್ಪನಾ 17,142 ಮತಗಳಿಂದ ಗಾಂಡೆ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. ಎನ್‌ಡಿಎ ಮೈತ್ರಿಕೂಟ 21 ಸ್ಥಾನ ಗೆದ್ದಿದೆ. 

ಈ ಮಧ್ಯೆ, ಕಾಂಗ್ರೆಸ್ ಪಕ್ಷದ ಒಂದು ವರ್ಗ ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸಬೇಕು ಎಂದು ಒತ್ತಾಯಿಸಿದೆ. ಈ ಬೇಡಿಕೆಗೆ ಹೇಮಂತ್ ಸೊರೇನ್ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.