ADVERTISEMENT

ಅಮ್ಮನ ವರ್ತನೆಯೇ ಆಕೆಯನ್ನು ಸಮಸ್ಯೆಗೆ ತಳ್ಳುತ್ತದೆ: ರಾನು ಮಂಡಲ್‌ ಪುತ್ರಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 7:47 IST
Last Updated 30 ನವೆಂಬರ್ 2019, 7:47 IST
   

ಮುಂಬೈ: ಗಾಯಕಿ ರಾನು ಮಂಡಲ್‌ ಅವರ ಮೇಕಪ್‌ ಅನ್ನು ಸಾಮಾಜಿಕ ತಾಣಗಳಲ್ಲಿ ಮೀಮ್‌, ಟ್ರೋಲ್‌ಗಳ ಮೂಲಕ ಗೇಲಿ ಮಾಡುತ್ತಿರುವ ನೆಟ್ಟಿಗರ ವಿರುದ್ಧ ರಾನು ಪುತ್ರಿ ಎಲಿಜಬೆತ್‌ ಸಾತಿ ರಾಯ್‌ ಅವರು ತೀವ್ರವಾಗಿ ಟೀಕಿಸಿದ್ದಾರೆ.

ಉತ್ತರಪ್ರದೇಶದ ಕಾನ್ಪುರದಲ್ಲಿ ಮೇಕಪ್‌ ಸಲೂನ್ ಆರಂಭಿಸಿದ್ದ ಮೇಕಪ್‌ ಕಲಾವಿದೆ ಸಂಧ್ಯಾ, ಉದ್ಘಾಟನೆ ಸಮಾರಂಭ ನಿಮಿತ್ತ ಕಂಪ್ಲೀಟ್ ಮೇಕ್‌ಓವರ್‌ಗಾಗಿ ರಾನು ಮಂಡಲ್ ಅವರನ್ನು ತಮ್ಮ ಸಲೂನ್‌ಗೆ ಆಹ್ವಾನಿಸಿದ್ದರು. ಅದರಂತೆ ಅಲ್ಲಿಗೆ ತೆರಳಿದ್ದ ರಾನು ಮಂಡಲ್‌ ಅವರಿಗೆ ತಿಳಿ ಆರೆಂಜ್ ಬಣ್ಣದ ಲೆಹಂಗಾ ತೊಡಿಸಿ ಅದಕ್ಕೊಪ್ಪುವ ಆಭರಣಗಳನ್ನು ಹಾಕಿದ್ದರು. ನಂತರ ರಾನುಗೆ ಮಾಡಲಾಗಿದ್ದ ಮೇಕಪ್‌ ಚಿತ್ರಗಳನ್ನು ಸಂಧ್ಯಾ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು ಕೂಡ.

ಇದಾದ ಕೆಲವೇ ಹೊತ್ತಿನಲ್ಲಿ ರಾನು ಅವರ ಮೇಕಪ್‌ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ಗೆ ಗುರಿಯಾದವು. ವಿಪರೀತ ಮೇಕಪ್‌ನ ಚಿತ್ರಗಳೂ ಕಾಡ್ಗಿಚ್ಚಿನಂತೆ ಸಾಮಾಜಿಕ ತಾಣವನ್ನು ಆವರಿಸಿದ್ದವು.

ADVERTISEMENT

ಈ ಬಗ್ಗೆ ಮಾತನಾಡಿರುವ ರಾನು ಪುತ್ರಿ ಸಾತಿ ರಾಯ್‌, ‘ಈ ಮಟ್ಟಕ್ಕೆ ನನ್ನ ತಾಯಿಯನ್ನು ಟ್ರೋಲ್‌ ಮಾಡುತ್ತಿರುವುದು ಬೇಸರ ತರಿಸಿದೆ. ನಿಜ... ನನ್ನ ತಾಯಿಯ ವರ್ತನೆಯಲ್ಲಿ ಸಮಸ್ಯ ಇದೆ. ಹಾಗಾಗಿಯೇ ಆಕೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಆದರೆ, ಜೀವನದಲ್ಲಿ ನೊಂದು ಬೆಂದು ಈಗಷ್ಟೇ ಯಶಸ್ಸಿನ ಕಡೆ ನೋಡುತ್ತಿರುವವರನ್ನು ಈ ಹಂತಕ್ಕೆ ಗೇಲಿ ಮಾಡಬಾರದು,’ ಎಂದು ಅವರು ಹೇಳಿಕೊಂಡಿದ್ದಾರೆ.

ಮೇಕಪ್‌ ಸಲೂನ್‌ನ ಉದ್ಘಾಟನೆ ನಂತರ ರಾನು ಮಂಡಲ್‌ ಅವರಿಂದ ರ್ಯಾಂಪ್‌ ವಾಕ್‌ ಮಾಡಿಸಿದ ಆಯೋಜಕರನ್ನೂ ಸಾತಿ ಖಂಡಿಸಿದ್ದಾರೆ. ‘ಗಾಯಕಿಯಾದ ನನ್ನ ತಾಯಿಯಿಂದ ಅಂಥದ್ದೊಂದು ರ್ಯಾಂಪ್‌ ವಾಕ್‌ ಮಾಡಿಸುವುದು ಅಗತ್ಯವಿತ್ತೇ? ಅವರು ಅದೇಕೆ ಹಾಗೆ ಮಾಡಬೇಕಿತ್ತು? ನನ್ನ ತಾಯಿ ಒಬ್ಬ ಗಾಯಕಿ. ಮಾಡೆಲ್‌ ಅಲ್ಲ. ಜನ ಆಕೆಯನ್ನು ಗೇಲಿ ಮಾಡುತ್ತಿದ್ದಾರೆ. ಇದು ನಿಜಕ್ಕೂ ತುಚ್ಚವಾದ ವರ್ತನೆ. ಜನ ಹೀಗೆಲ್ಲ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನಮ್ಮ ಶ್ರೀಮಂತ ಮನೆತನದಿಂದ ಬಂದವರಲ್ಲ. ಅತ್ಯಂತ ಬಡ ಕುಟುಂಬದಿಂದ ಬಂದವರು. ಆಕೆ ಈ ವರೆಗೆ ಚಂದವಾಗಿ ಸಿಂಗಾರ ಮಾಡಿಕೊಂಡಿಲ್ಲ. ಆಕೆ ರಸ್ತೆಯಲ್ಲಿ ಹಾಡುತ್ತಿದ್ದವರು, ಆಕಸ್ಮಿಕವಾಗಿ ಪ್ರಸಿದ್ಧಿ ಪಡೆದಿದ್ದಾರೆ ಅಷ್ಟೇ,’ ಎಂದಿದ್ದಾರೆ ಸಾತಿ.

‘ನನ್ನ ತಾಯಿ ವಿರುದ್ಧದ ಟ್ರೋಲ್‌ಗಳ ಹಿಂದೆ ಏನೋ ಉದ್ದೇಶ ಅಡಗಿದೆ. ಇತ್ತೀಚೆಗೆ ಮೈಕೈ ಮುಟ್ಟಿ ಸೆಲ್ಫಿ ಕೇಳಲು ಬಂದವರೊಬ್ಬರ ಮೇಲೆ ನನ್ನ ಅಮ್ಮ ರೇಗಿದ್ದರು. ನನಗನಿಸುತ್ತದೆ. ಅವರೆಲ್ಲರೂ ಆಕೆಯನ್ನು ರೇಗಿಸುತ್ತಿದ್ದಾರೆ ಎಂದು. ನನ್ನಮ್ಮ ಇಷ್ಟು ಪ್ರಖ್ಯಾತರಾಗಲು ಜನರೇ ಕಾರಣ. ಆಕೆಯ ಸಂಗೀತದ ವಿಡಿಯೊವನ್ನು ವೈರಲ್‌ ಮಾಡಿದ್ದು ಜನರೇ. ಈಗ ಆಕೆ ಮೇಲಿನ ಕೋಪವನ್ನು ಅವರು ಮೀಮ್‌ ಹಂಚುವ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ,’ ಎಂದೂ ಅವರು ಹೇಳಿಕೊಂಡಿದ್ದಾರೆ.
ಟ್ರೋಲ್‌, ಮೀಮ್‌ಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ, ಆಕೆಯ ಹಾಡು ಕೇಳಲು ಜನರು ಇಷ್ಟಪಡುತ್ತಾರೆ, ನನ್ನಮ್ಮನ್ನು ಪ್ರೀತಿಸುವ ದೊಡ್ಡ ವರ್ಗವೇ ಇದೆ ಎಂದೂ ಸಾತಿ ಹೇಳಿಕೊಂಡಿದ್ದಾರೆ.

ರಾನು ಮಂಡಲ್‌ ಅವರ ಮೇಕಪ್‌ಗೆ ಸಂಬಂಧಿಸಿದ ಮೀಮ್‌ಗಳು ಇಲ್ಲಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.