ADVERTISEMENT

ಮೊದಲ ಹಂತದ ಚುನಾವಣೆಯ ಪ್ರಮುಖ ಹುರಿಯಾಳುಗಳಿವರು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 2:44 IST
Last Updated 11 ಏಪ್ರಿಲ್ 2019, 2:44 IST
   

ನವದೆಹಲಿ: ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಇಂದು ಪ್ರಜಾತಂತ್ರದ ಹಬ್ಬ. 17ನೇ ಲೋಕಸಭೆಗಾಗಿ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದು ಮೊದಲ ಹಂತವಾಗಿ 91 ಲೋಕಸಭೆ ಕ್ಷೇತ್ರಗಳೂ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭೆಗೆ ಮತದಾನ ಆರಂಭವಾಗಿದೆ.

ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧೆ ಮಾಡಿರುವ ಒಟ್ಟಾರೆ 1300 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿದೆ. ಇದಕ್ಕಾಗಿ 1,70,000 ಮತಕೇಂದ್ರಗಳನ್ನು ತೆರಯಲಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವೂ ಆಗಿದೆ.

ಇಂದು ಮತದಾನ ನಡೆಯುತ್ತಿರುವ 91 ಲೋಕಸಭೆ ಕ್ಷೇತ್ರಗಳು ಮತ್ತು ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯಲ್ಲಿರುವ ಪ್ರಮುಖ ಅಭ್ಯರ್ಥಿಗಳು ಯಾರು ಎಂಬುದರ ಮಾಹಿತಿ ನಿಮಗಾಗಿ...

ADVERTISEMENT

ಮಹಾರಾಷ್ಟ್ರ

ನಾಗ್ಪುರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಈ ನಾಗ್ಪುರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದಲೇ ಸಿಡಿದು ಹೊರ ಹೋದ ನಾನಾ ಪಾಟೋಲೆ ಎಂಬುವವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ನಿತಿನ್‌ ಗಡ್ಕರಿ ಅವರು ಸದ್ಯ ಮೋದಿಗೆ ಪರ್ಯಾಯ ನಾಯಕ ಎಂದೇ ಬಿಂಬಿತವಾಗಿದ್ದಾರೆ.

ತೆಲಂಗಾಣ

ಹೈದರಾಬಾದ್‌: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಈ ಕ್ಷೇತ್ರದಿಂದ ಮರು ಆಯ್ಕೆ ಬಯಿಸಿದ್ದಾರೆ. 1984ರಿಂದ ಹೈದರಾಬಾದ್‌ ಎಐಎಂಐಎಂನ ಭದ್ರಕೋಟೆ.

ನಿಜಾಮಾಬಾದ್‌: ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಪುತ್ರಿ ಕವಿತಾ ಅವರು ಇಲ್ಲಿಂದ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಮಧು ಯಾಕ್ಷಿ ಗೌಡ ಹುರಿಯಾಳು. ಈ ಕ್ಷೇತ್ರದಲ್ಲಿ 185 ಅಭ್ಯರ್ಥಿಗಳಿದ್ದು, ಚುನಾವಣೆ ಆಯೋಗ ಮತಯಂತ್ರಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದೆ.

ಆಂಧ್ರಪ್ರದೇಶ

ಕಮ್ಮಮ್‌: ಟಿಡಿಪಿಯ ಹಾಲಿ ಸಂಸದ ನಮ ನಾಗೇಶ್ವರ ರಾವ್‌ ಮತ್ತು ಕಾಂಗ್ರೆಸ್‌ನ ಪ್ರಭಾವಿ ನಾಯಕಿ ರೇಣುಕಾ ಚೌದರಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಚೌದರಿ ಅವರು 1999ರಲ್ಲಿ ಗೆದ್ದದ್ದು ಬಿಟ್ಟರೆ ನಂತರದ ಎರಡು ಚುನಾವಣೆಗಳನ್ನು ಸೋತಿದ್ದಾರೆ.

ಗುಂಟೂರು: ನಿನ್ನೆಯಷ್ಟೇ ಆದಾಯ ತೆರಿಗೆ ಇಲಾಖೆಯ ದಾಳಿಗೆ ಒಳಗಾದ ಗಲ್ಲಾ ಜಯದೇವ ಅವರು ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ಕಳೆದ ಜುಲೈನಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಪ್ರಸ್ತಾಪಿಸಿದ್ದ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವರು ಗಲ್ಲಾ ಜಯದೇವ ಅವರೇ. ಅವರು ಆಂಧ್ರದ ಅತ್ಯಂತ ಶ್ರೀಮಂತ ರಾಜಕಾರಣಿಯೂ ಹೌದು.

ಆಂಧ್ರ ಪ್ರದೇಶ ವಿಧಾನಸಭೆ

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಕುಪ್ಪಂ ಕ್ಷೇತ್ರದಿಂದ, ಪುತ್ರ ನಾರಾ ಲೋಕೇಶ್‌ ಮಂಗಳಗಿರಿ ಕ್ಷೇತ್ರದಿಂದ ಮೊದಲಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಅಲ್ಲಿನ ಪ್ರಮುಖ ವಿರೋಧ ಪಕ್ಷವಾದ ವೈಎಸ್‌ಆರ್‌ಸಿಪಿಯ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರ ಪುಲಿವೆಂದುಲ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದಾರೆ.

ಉತ್ತರ ಪ್ರದೇಶ

ಘಾಜಿಯಾಬಾದ್‌ ಮತ್ತು ಗೌತಮ ಬುದ್ಧ ನಗರ: ಕೇಂದ್ರ ಸಚಿವ ಜನರಲ್‌ ವಿಕೆ ಸಿಂಗ್‌ ಮತ್ತು ಮಹೇಶ್‌ ಶರ್ಮಾ ಅವರು ಕ್ರಮವಾಗಿ ಈ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ.2013ರಲ್ಲಿ ಕೋಮುದಳ್ಳುರಿಯಿಂದ ನಲುಗಿ ಹೋಗಿದ್ದ ಮುಜಪ್ಫರನಗರ ಕ್ಷೇತ್ರದಿಂದ ರಾಷ್ಟ್ರೀಯ ಲೋಕದಳದ ವರಿಷ್ಠ, ಕೇಂದ್ರದ ಮಾಜಿ ಸಚಿವ ಅಜಿತ್‌ ಸಿಂಗ್‌ ಸ್ಪರ್ಧೆ ಮಾಡುತ್ತಿದ್ದಾರೆ. ಸದ್ಯ ಅಲ್ಲಿ ಸಂಸದ ಸಂಜೀವ್‌ ಬಲ್ಯಾನ್‌ ಅವರು ಬಿಜೆಪಿ ಉಮೇದುವಾರ. ರಾಷ್ಟ್ರೀಯ ಲೋಕದಳದ ವರಿಷ್ಠ ಅಜಿತ್‌ ಸಿಂಗ್‌ ಪುತ್ರ ಜಯಂತ್‌ ಚೌದರಿ ಅವರು ಬಾಗ್ಪತದಿಂದ ಕೇಂದ್ರ ಸಚಿವ, ಹಾಲಿ ಸಂಸದ ಬಿಜೆಪಿಯ ಸತ್ಯಪಾಲ್‌ ಸಿಂಗ್‌ ವಿರುದ್ಧ ಸ್ಪರ್ಧೆ ಮಾಡುತ್ತಿದ್ದು, ಕ್ಷೇತ್ರ ಹೈವೋಲ್ಟೇಜ್‌ ಆಗಿ ಪರಿಣಮಿಸಿದೆ.

ಬಿಹಾರ

ಬಿಹಾರದ ಜಮುಯ್‌ ಕ್ಷೇತ್ರದಿಂದ ಎಲ್‌ಜೆಪಿ ವರಿಷ್ಠ ರಾಮ್‌ ವಿಲಾಸ್‌ ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಗಯಾ ಕ್ಷೇತ್ರದಿಂದ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಂ ಮಾಂಜಿ ಅವರು ಮಹಾಘಟಬಂಧನದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ವಿರುದ್ಧ ಜೆಡಿಯುನ ವಿಜಯಕುಮಾರ್‌ ಮಂಜಿಹಿ ಅವರು ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ಈ ಕ್ಷೇತ್ರವನ್ನು ಬಿಜೆಪಿ ಗೆದ್ದಿತ್ತು.

ಈಶಾನ್ಯ ಭಾರತ

ಅರುಣಾಚಲಪ್ರದೇಶ: ಅರುಣಾಚಲಪ್ರದೇಶ ಪಶ್ಚಿಮ ಲೋಕಸಭೆ ಕ್ಷೇತ್ರವು ಭಾರಿ ಪೈಪೋಟಿಗೆ ಕಾರಣವಾಗಿದೆ. ಇಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದರೆ, ಅವರ ವಿರುದ್ಧ ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ನಬಾಮ್‌ ಟುಕಿ ಅವರನ್ನೇ ಕಣಕ್ಕಿಳಿಸಿದೆ. ಹೀಗಾಗಿ ಅರುಣಾಚಲ ಪ್ರದೇಶ ಪಶ್ಚಿಮ ಕ್ಷೇತ್ರ ಭಾರಿ ಕುತೂಹಲದ ಕ್ಷೇತ್ರ.

ಅಸ್ಸಾಂ: ಇಲ್ಲಿನ ಕಲಿಬೋರ್‌ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೋಯ್‌ ಅವರ ಪುತ್ರ ಗೌರವ್‌ ಗೊಗೋಯ್‌ ಅವರು ಕಾಂಗ್ರೆಸ್‌ನಿಂದ ಪುನರಾಯ್ಕೆ ಬಯಸಿದ್ದಾರೆ. 1991ರಿಂದಲೂ ಇಲ್ಲಿ ಗೊಗೋಯ್‌ ಕುಟುಂಬದವರೇ ಗೆಲ್ಲುತ್ತಾ ಬಂದಿದ್ದಾರೆ.

ಮೇಘಾಲಯದ ಟುರಾ ಜಿದ್ದಾ ಜಿದ್ದಿಗೆ ಕಾರಣವಾಗಿದ್ದು, ಇಲ್ಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳ ಪರೋಕ್ಷ ಹೋರಾಟ ಏರ್ಪಟ್ಟಿದೆ. ಮೇಘಾಲಯ ಮುಖ್ಯಮಂತ್ರಿ ಕೋನ್ರಾಡ್‌ ಸಂಗ್ಮಾ ಅವರ ಸೋದರಿ ಅಗಾತ ಸಂಗ್ಮಾ ಇಲ್ಲಿ ಎನ್‌ಪಿಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ಮುಖುಲ್‌ ಸಂಗ್ಮಾ ಅವರನ್ನೇ ಕಣಕ್ಕಿಳಿಸಿದೆ.

ಉತ್ತರಾಖಂಡ

ನೈನಿತಾಲ್‌–ಉಧಾಮ್‌ಸಿಂಗ್‌ ನಗರ್‌: ಉತ್ತರಾಖಂಡದ ಮಟ್ಟಿಗೆ ಬಹುದೊಡ್ಡ ಕಾಳಗ ಏರ್ಪಟ್ಟಿರುವುದು ನೈನಿತಾಲ್‌ನಲ್ಲೇ. ಇಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರೆ, ಅತ್ತ ಬಿಜೆಪಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಜಯ್‌ ಭಟ್‌ ಅವರೇ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ಭಾರಿ ಪೈಪೋಟಿಯೇ ಏರ್ಪಟ್ಟಿದೆ.

ಗರ್ವಾಲ್‌: ಇಲ್ಲಿ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಬಿ.ಸಿ ಖಂಡೂರಿ ಅವರ ಪುತ್ರ ಮನೀಶ್‌ ಖಂಡೂರಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಒಂದು ಕಾಲಕ್ಕೆ ಬಿ.ಸಿ ಖಂಡೂರಿಗೆ ಹೆಗಲಿಗೆ ಹೆಗಲಾಗಿ ದುಡಿದಿದ್ದ ತಿರತ್‌ ಸಿಂಗ್‌ ಅವರು ಈಗ ಬಿಜೆಪಿ ಸೇರಿ ಸ್ಪರ್ಧೆಗೆ ಇಳಿದಿದ್ದಾರೆ. ಉತ್ತರಾಖಂಡದ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಈ ಕ್ಷೇತ್ರಕ್ಕೂ ಇಂದು ಮತದಾನ ನಡೆಯುತ್ತಿದೆ.

ಜಮ್ಮು ಕಾಶ್ಮೀರ:

ಜಮ್ಮು ಕ್ಷೇತ್ರದಿಂದ ಬಿಜೆಪಿ ಈ ಬಾರಿ ಹಾಲಿ ಸಂಸದ ಜುಗಲ್‌ ಕಿಶೋರ್ ಶರ್ಮಾ ಅವರನ್ನೇ ಕಣಕ್ಕಿಳಿಸಿದೆ. ಆದರೆ, ಕಾಂಗ್ರೆಸ್‌ ಪಕ್ಷ ಅಲ್ಲಿನ ಪ್ರಭಾವಿ ನಾಯಕ ರಾಮಣ್‌ ಬಲ್ಲಾ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಸ್ಥಳೀಯ ಪಕ್ಷಗಳಾದ ಎನ್‌ಸಿ ಮತ್ತು ಪಿಡಿಪಿ ಇಲ್ಲಿ ಕಾಂಗ್ರೆಸ್‌ ಅಭ್ಯರರ್ಥಿಯನ್ನು ಬೆಂಬಲಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.