ಗುವಾಹಟಿ: ಶಂಕಿತ ಮಾದಕ ವಸ್ತು ವ್ಯಾಪಾರಿಯನ್ನು ಬಂಧಿಸಿ, ಆತನಿಂದ ₹16 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸೋಪಿನ ಡಬ್ಬಿಗಳಲ್ಲಿ ಪ್ಯಾಕ್ ಮಾಡಲಾದ ಹೆರಾಯಿನ್‌ನನ್ನು ಮಣಿಪುರದಿಂದ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಇತ್ತು. ಮೊದಲಿಗೆ ಕಾಮರೂಪ್ ಜಿಲ್ಲೆಯ ಚಂಗಸಾರಿ ಅಥವಾ ಪಲಾಸ್‌ಬರಿಗೆ ತರುವ ಯೋಜನೆಯಿತ್ತು. ಬಳಿಕ ಗುವಾಹಟಿ ಹೊರವಲಯ ಸೋನಾಪುರಕ್ಕೆ ತರಲು ಯೋಚಿಸಿದ್ದರು’ ಎಂದು ಕಾಮರೂಪ್ ಮಹಾನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂದು ಕಲ್ಯಾಣ್ ಪಾತಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಸೋನಾಪುರ ಟೋಲ್‌ಗೇಟ್ ಬಳಿ ಡ್ರಗ್ಸ್ ಸಾಗಿಸುತ್ತಿದ್ದ ವಾಹನವನ್ನು ಪರಿಶೀಲಿಸಲು ಪೊಲೀಸರ ತಂಡ ಮುಂದಾಗಿತ್ತು. ಈ ವೇಳೆ ಚಾಲಕ ವಾಹನವನ್ನು ನಿಲ್ಲಿಸದ ಕಾರಣ ಪೊಲೀಸರು ವಾಹನದತ್ತ ಗುಂಡು ಹಾರಿಸಿದರು. ಸದ್ಯ ಚಾಲಕನನ್ನು ಬಂಧಿಸಲಾಗಿದೆ. ಗುಂಡಿನ ದಾಳಿಯಿಂದ ಚಾಲಕ ಅಲ್ಪಪ್ರಮಾಣದಲ್ಲಿ ಗಾಯಗೊಂಡಿದ್ದಾನೆ’ ಎಂದು ತಿಳಿಸಿದರು.
ವಾಹದಲ್ಲಿದ್ದ 145 ಪ್ಯಾಕೆಟ್ (2 ಕೆ.ಜಿ) ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ₹16 ಕೋಟಿ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಇಂಥದ್ದೇ ಪ್ರಕರಣದಲ್ಲಿ ಈ ಮುಂಚೆ ಸಹ ಬಂಧಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.