ADVERTISEMENT

ಉತ್ತರಾಖಂಡ್‌ನಲ್ಲೂ ಹಕ್ಕಿಜ್ವರ ಪತ್ತೆ: ಹೈ ಅಲರ್ಟ್ ಘೋಷಣೆ

ಪಿಟಿಐ
Published 12 ಜನವರಿ 2021, 9:50 IST
Last Updated 12 ಜನವರಿ 2021, 9:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡೆಹ್ರಾಡೂನ್: ಉತ್ತರಾಖಂಡದಲ್ಲೂ ಹಕ್ಕಿಜ್ವರ ರೋಗ ಪತ್ತೆಯಾಗಿರುವ ಬೆನ್ನಲ್ಲೇ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಎರಡು ಸತ್ತ ಕಾಗೆಗಳ ಮಾದರಿಗಳನ್ನು ಭೋಪಾಲ್‌ನ ಲ್ಯಾಬ್‌ಗೆ ಕಳುಹಿಸಲಾಗಿತ್ತು, ಅವುಗಳಿಗೆ ಹಕ್ಕಿ ಜ್ವರದ ಸೋಂಕು ತಗುಲಿದ್ದು ಪತ್ತೆಯಾಗಿದೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಉತ್ತರಾಖಂಡದಲ್ಲಿ ಹಕ್ಕಿ ಜ್ವರ ದೃಢಪಟ್ಟ ಬೆನ್ನಲ್ಲೇ ರಾಜ್ಯದಾದ್ಯಂತ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ನೆರೆಯ ರಾಜ್ಯಗಳಾದ ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಪ್ರದೇಶದಿಂದ ಕೋಳಿ ಮತ್ತು ಮೊಟ್ಟೆಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಪಶುಸಂಗೋಪನಾ ಸಚಿವೆ ರೇಖಾ ಆರ್ಯ ಹೇಳಿದ್ದಾರೆ.

ಆದರೆ, ಇಲ್ಲಿಯವರೆಗೆ ಉತ್ತರಾಖಂಡದಲ್ಲಿ ಕಾಡು ಪಕ್ಷಿಗಳಲ್ಲಿ ಮಾತ್ರ ಹಕ್ಕಿ ಜ್ವರ ಕಂಡುಬಂದಿದ್ದು, ಕುಕ್ಕುಟೋದ್ಯಮ ವೈರಸ್‌ನಿಂದ ಮುಕ್ತವಾಗಿದೆ. ಸದ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸತ್ತ ಹಕ್ಕಿಯು ಕಂಡುಬಂದರೆ ಅವನ್ನು ಮುಟ್ಟಬಾರದು ಮತ್ತು ಆ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವಂತೆ ಜನರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ADVERTISEMENT

ಸತ್ತ ಪಕ್ಷಿಗಳ ಮಾದರಿಗಳನ್ನು ಸಂಗ್ರಹಿಸುವಲ್ಲಿ ಅಥವಾ ಅವುಗಳನ್ನು ಹೂತುಹಾಕುವಲ್ಲಿ ತೊಡಗಿರುವ ಅರಣ್ಯ ಸಿಬ್ಬಂದಿ ಪಿಪಿಇ ಕಿಟ್‌ಗಳನ್ನು ಧರಿಸದೆಯೇ ಆ ಕೆಲಸವನ್ನು ಮಾಡದಂತೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುಮಾರು 300 ಪಕ್ಷಿಗಳು ಅವುಗಳಲ್ಲಿ ಹೆಚ್ಚಾಗಿ ಕಾಗೆಗಳು ಡೆಹರಾಡೂನ್, ಹೃಷಿಕೇಶ ಮತ್ತು ಕೊಟ್ದ್ವಾರ್ ಸೇರಿದಂತೆ ಉತ್ತರಾಖಂಡದ ವಿವಿಧ ಭಾಗಗಳಲ್ಲಿ ಮೃತಪಟ್ಟಿವೆ.

ಇವುಗಳಲ್ಲಿ ಬಹುಪಾಲು ಪಕ್ಷಿಗಳನ್ನು ಸುರಕ್ಷಿತವಾಗಿ ಹೂಳಲಾಗಿದ್ದರೆ, ಅವುಗಳಲ್ಲಿ ಕೆಲವನ್ನು ಭೋಪಾಲ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಮತ್ತು ಉತ್ತರ ಪ್ರದೇಶದ ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಗೆ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.