ಚೆನ್ನೈ: ಪಕ್ಷದ ಕಚೇರಿ ಆವರಣದಲ್ಲಿ ತಮ್ಮ ಪತಿಯ ಮೃತದೇಹದ ಅಂತ್ಯಸಂಸ್ಕಾರಕ್ಕೆ ಅನುಮತಿ ಕೋರಿ ಹತ್ಯೆಗೀಡಾಗಿರುವ ತಮಿಳುನಾಡಿನ ಬಿಎಸ್‌ಪಿ ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಪತ್ನಿ ಸಲ್ಲಿಸಿದ್ದ ಮನವಿಯನ್ನು ಆಲಿಸಿದ ಮದ್ರಾಸ್ ಹೈಕೋರ್ಟ್, ನೆರೆಯ ತಿರುವಳ್ಳೂರ್ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಅನುಮತಿ ನೀಡಿದೆ.
ಪಕ್ಷದ ಕಚೇರಿ ಜನವಸತಿ ಪ್ರದೇಶದಲ್ಲಿರುವುದರಿಂದ ಅಲ್ಲಿ ಅಂತ್ಯಸಂಸ್ಕಾರ ನೆರವೇರಿಸುವುದು ಸೂಕ್ತವಲ್ಲ ಎಂದು ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ತಮಿಳುನಾಡು ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್(52) ಅವರನ್ನು ಶುಕ್ರವಾರ ದುಷ್ಕಮಿಗಳ ಗುಂಪೊಂದು ಕೊಚ್ಚಿ ಕೊಂದಿತ್ತು.
ತಮ್ಮ ಪತಿಯ ಮೃತದೇಹದ ಅಂತ್ಯಸಂಸ್ಕಾರವನ್ನು ಪಕ್ಷದ ಕಚೇರಿಯಲ್ಲೇ ನಡೆಸಲು ಅನುಮತಿ ಕೋರಿ ಆರ್ಮ್‌ಸ್ಟ್ರಾಂಗ್ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ವಿ. ಭವಾನಿ ಸುಬ್ಬರಾಯನ್ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.
ಪಕ್ಷದ ಕಚೇರಿ ಜನವಸತಿ ಪ್ರದೇಶದಲ್ಲಿರುವುದರಿಂದ ಅಲ್ಲಿ ಅಂತ್ಯಸಂಸ್ಕಾರಕ್ಕೆ ಸರ್ಕಾರ ವಿರೋಧಿಸಿತ್ತು. ಬಳಿಕ, ತಿರುವಳ್ಳೂರ್ ಜಿಲ್ಲೆಯ ಪೊತೂರ್‌ನಲ್ಲಿ ಆರ್ಮ್‌ಸ್ಟ್ರಾಂಗ್ ಸಂಬಂಧಿಕರ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಪ್ರಕ್ರಿಯೆಗೆ ಸಂಬಂಧಿಸಿದ ಆದೇಶಗಳನ್ನು ಸಹ ನೀಡಲಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ. ರವೀಂದ್ರನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಸರ್ಕಾರದ ಪ್ರಸ್ತಾವನೆಯನ್ನು ಅರ್ಜಿದಾರರು ಒಪ್ಪಿಕೊಂಡಿದ್ದರಿಂದ ಪೊತೂರ್‌ನಲ್ಲಿ ಆರ್ಮ್‌ಸ್ಟ್ರಾಂಗ್ ಮೃತದೇಹದ ಅಂತ್ಯಸಂಸ್ಕಾರಕ್ಕೆ ನ್ಯಾಯಾಲಯ ಆದೇಶಿಸಿತು.
ಶಾಂತಿಯುತವಾಗಿ ಅಂತಿಮ ಯಾತ್ರೆ ನೆರವೇರಿಸಲು ಅರ್ಜಿದಾರರಿಗೆ ನಿರ್ದೇಶಿಸಿದ ನ್ಯಾಯಾಲಯ, ಭದ್ರತೆ ನೀಡಲು ಪೊಲೀಸರಿಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.