ಪ್ರಯಾಗರಾಜ್: ಪ್ರವೇಶಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ನೀಡಲು ನಿರಾಕರಿಸಿದ ಅಲಹಾಬಾದ್ ವಿಶ್ವವಿದ್ಯಾನಿಲಯಕ್ಕೆ ಅಲಹಾಬಾದ್ ಹೈಕೋರ್ಟ್ ₹50 ಸಾವಿರ ದಂಡ ವಿಧಿಸಿದೆ.
15 ದಿನದೊಳಗಾಗಿ ವಿದ್ಯಾರ್ಥಿ ಅಜಯ್ ಸಿಂಗ್‌ಗೆ ₹50 ಸಾವಿರ ಪರಿಹಾರವಾಗಿ ಪಾವತಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
2022–23ನೇ ಸಾಲಿನ ಮಹಿಳಾ ಅಧ್ಯಯನದಲ್ಲಿ ಎಂ.ಎ ಕೋರ್ಸ್‌ಗೆ ಆಯ್ಕೆ ಪ್ರಕ್ರಿಯೆ ನಂತರ ವಿಶ್ವವಿದ್ಯಾಲಯವು ಅರ್ಹತೆ ನಿಯಮಗಳನ್ನು ಬದಲಿಸಿದೆ. ಆದರೆ ಅರ್ಜಿದಾರರಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ನ್ಯಾಯಮೂರ್ತಿ ಅಶುತೋಷ್ ಶ್ರೀವತ್ಸ ಹೇಳಿದ್ದಾರೆ.
ಅರ್ಜಿದಾರರು ಕೋರ್ಸ್‌ನ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೆ 2022ರ ಜೂನ್ 25ರಂದು ನಿಗದಿಪಡಿಸಲಾದ ಮಾನದಂಡವನ್ನು ಪೂರೈಸದ ಕಾರಣ, ಅಜಯ್ ಸಿಂಗ್ ಅವರಿಗೆ ಪ್ರವೇಶ ನೀಡಲು ವಿಶ್ವವಿದ್ಯಾಲಯದ ಆಡಳಿತವು ನಿರಾಕರಿಸಿತ್ತು.
ಆದರೆ ಈ ನಿಯಮಗಳ ಅಧಿಸೂಚನೆಯನ್ನು 2022ರ ಜುಲೈ 29ರಂದು ಹೊರಡಿಸಿತ್ತು.
‘ಅರ್ಜಿದಾರರ ಅಭ್ಯರ್ಥಿತನವನ್ನು ರದ್ದು ಮಾಡಿದ ವಿಶ್ವವಿದ್ಯಾಲಯದ ನಡೆ ತಪ್ಪು. ಆಟ ಪ್ರಾರಂಭವಾದ ಬಳಿಕ ನಿಯಮಗಳನ್ನು ಬದಲಿಸುವಂತಿಲ್ಲ’ ಎಂದು ವಿದ್ಯಾರ್ಥಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
‘ಅರ್ಜಿದಾರರು 2022–23ನೇ ಸಾಲಿನ ಪ್ರವೇಶಾತಿ ಬಯಸಿದ್ದರು. ಶೈಕ್ಷಣಿಕ ವರ್ಷ ಆಗಲೇ ಪ್ರಾರಂಭವಾಗಿತ್ತು. ಪ್ರವೇಶ ನಿರಾಕರಿಸಿದ್ದರಿಂದ ಅರ್ಜಿದಾರರು ಅಗಾಧವಾಗಿ ತೊಂದರೆಗೀಡಾಗಿದ್ದಾರೆ. ಅನಗತ್ಯವಾಗಿ ಅವರನ್ನು ನ್ಯಾಯಾಯಲಕ್ಕೆ ಬರುವಂತೆ ಮಾಡಲಾಗಿದೆ. ಹೀಗಾಗಿ ಅರ್ಜಿದಾರರು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು 15 ದಿನದೊಳಗೆ ₹50 ಸಾವಿರವನ್ನು ಪರಿಹಾರವಾಗಿ ಪಾವತಿ ಮಾಡಬೇಕು ಎಂದು ವಿಶ್ವವಿದ್ಯಾಲಯದ ಆಡಳಿತಕ್ಕೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.