ಶಬರಿಮಲೆ: ಕೇರಳದ ಸುಪ್ರಸಿದ್ಧ ಶಬರಿಮಲೆ ದೇವಸ್ಥಾನವು ತಿಂಗಳ ಪೂಜೆಗಾಗಿ ಬಾಗಿಲು ತೆರೆದು ಮೂರು ದಿನಗಳು ಕಳೆದರೂ ಮಹಿಳೆಯರ ಪ್ರವೇಶದ ಮೂಲಕ ಇತಿಹಾಸ ಸೃಷ್ಟಿ ಸಾಧ್ಯವಾಗಿಲ್ಲ.
ಸುದೀರ್ಘ ಸಂಘರ್ಷ ಮತ್ತು ಬಿಗುವಿನ ಕ್ಷಣಗಳ ಬಳಿಕ ಇಬ್ಬರು ಮಹಿಳೆಯರು ಶಬರಿಮಲೆಯ ತುತ್ತತುದಿಗೆ ತಲುಪಿದರು. ಆದರೆ, ಅಯ್ಯಪ್ಪ ಭಕ್ತರ ಪ್ರತಿಭಟನೆ ತೀವ್ರಗೊಂಡ ಕಾರಣ ಅವರು ದೇವಾಲಯದೊಳಕ್ಕೆ ಪ್ರವೇಶಿಸುವುದು ಸಾಧ್ಯವಾಗಲಿಲ್ಲ.
ದೇವಸ್ಥಾನಕ್ಕೆ ಹೋಗುವ ಹದಿನೆಂಟು ಮೆಟ್ಟಿಲುಗಳಿಗಿಂತ ಸ್ವಲ್ಪ ದೂರದಲ್ಲಿಯೇ ಈ ಮಹಿಳೆಯರು ಮತ್ತು ಅವರಿಗೆ ಬೆಂಗಾವಲಾಗಿ ಬಂದಿದ್ದ ಭಾರಿ ಸಂಖ್ಯೆಯ ಪೊಲೀಸ್ ತಂಡವನ್ನು ಭಕ್ತರ ಗುಂಪು ತಡೆಯಿತು. ಈ ಇಬ್ಬರು ಮಹಿಳೆಯರಲ್ಲಿ ಒಬ್ಬರು ಹೈದರಾಬಾದ್‌ನ ಪತ್ರಕರ್ತೆ ಮತ್ತು ಇನ್ನೊಬ್ಬರು ಕೇರಳದ ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸಲಾಗಿದೆ. ಈ ಇಬ್ಬರು ಹಿಂದಿರುಗುತ್ತಿದ್ದಂತೆಯೇ ಮತ್ತೊಬ್ಬ ಮಹಿಳೆ ಮಲೆ ಏರಲು ಆರಂಭಿಸಿದರು. ಆದರೆ, ಪ್ರತಿಭಟನೆಯಿಂದಾಗಿ ಅವರು ತಮ್ಮ ಪ್ರಯತ್ನ ಕೈಬಿಟ್ಟರು.
ಇದನ್ನೂ ಓದಿ:ಎಚ್ಚರವಿರಲು ಕರ್ನಾಟಕಕ್ಕೂ ಸೂಚನೆ
ಈ ಮಹಿಳೆಯರು ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಿದ್ದರೆ ಇತಿಹಾಸ ಸೃಷ್ಟಿಯಾಗುತ್ತಿತ್ತು. ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶಿಸುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ದೇವಸ್ಥಾನದೊಳಕ್ಕೆ ಹೋದ ಮೊದಲ ಮಹಿಳೆಯರು ಎಂಬ ದಾಖಲೆ ಅವರದಾಗುತ್ತಿತ್ತು.
ಪೊಲೀಸ್ ಮಹಾ ನಿರೀಕ್ಷಕ ಎಸ್. ಶ್ರೀಜಿತ್ ಅವರೇ ಮಹಿಳೆಯರ ರಕ್ಷಣೆಯ ಹೊಣೆ ಹೊತ್ತಿದ್ದ ಪೊಲೀಸ್ ತಂಡದ ನೇತೃತ್ವ ವಹಿಸಿದ್ದರು. ಇಬ್ಬರೂ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸದೆಯೇ ಹಿಂದಿರುಗಲು ಬಯಸಿದರು ಎಂದು ಶ್ರೀಜಿತ್ ಅವರು ತಿಳಿಸಿದ್ದಾರೆ.
ಈ ವಿಷಯವನ್ನು ಶ್ರೀಜಿತ್ ಅವರು ತಿಳಿಸುತ್ತಿದ್ದಂತೆಯೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷ ದಶ ದಿಕ್ಕುಗಳಲ್ಲಿಯೂ ಮೊಳಗಿತು.
ಅಯ್ಯಪ್ಪ ದೇವಸ್ಥಾನದ ಪೂಜೆಯಲ್ಲಿ ಸಹಕರಿಸುವ ‘ಪರಿಕರ್ಮಿ’ಗಳು ಕೂಡ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಹದಿನೆಂಟು ಮೆಟ್ಟಿಲುಗಳಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು.
ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುವ ಎಲ್ಲ ಸಾಧ್ಯತೆಗಳೂ ಇದ್ದವು. ಯಾರದೇ ಭಾವನೆಗಳಿಗೆ ನೋವು ಉಂಟು ಮಾಡುವ ಉದ್ದೇಶ ಇಲ್ಲ, ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿ ಮಾಡುವುದಷ್ಟೇ ತಮ್ಮ ಉದ್ದೇಶ ಎಂದು ಹೇಳಿದ ಶ್ರೀಜಿತ್ ಅವರು ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ಮಾಡಿದರು.
ಆಂಧ್ರ ಪ್ರದೇಶದ ಭಕ್ತೆ ಮಾಧವಿ ಮತ್ತು ದೆಹಲಿಯ ಪತ್ರಕರ್ತೆಯೊಬ್ಬರು ಮೊದಲ ಎರಡು ದಿನಗಳಲ್ಲಿ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ ಪ್ರತಿಭಟನೆಯಿಂದಾಗಿ ಅವರು ತಮ್ಮಪ್ರಯತ್ನ ಕೈಬಿಟ್ಟಿದ್ದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರಲು ಕೇರಳ ಸರ್ಕಾರ ನಿರ್ಧರಿಸಿದೆ. ಇದನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ಶಬರಿಮಲೆ ಸುತ್ತಲಿನ ಪ್ರದೇಶಗಳಲ್ಲಿ ಮತ್ತು ಕೇರಳದ ಇತರೆಡೆಗಳಲ್ಲಿ ಭಕ್ತರು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
**
ಶುಕ್ರವಾರ ಮಹಿಳೆಯರಿಬ್ಬರುಹಿಂದಿರುಗಿದ್ದು ಯಾಕೆ?:
* ಬಲಪ್ರಯೋಗದ ಮೂಲಕ ಭಕ್ತರನ್ನು ತೆರವು ಮಾಡಿ ಮಹಿಳೆಯರನ್ನು ದೇವಾಲಯದೊಳಕ್ಕೆ ಕರೆದೊಯ್ಯುವುದು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ
* ಮಹಿಳೆಯರು ದೇವಸ್ಥಾನದೊಳಕ್ಕೆ ಹೊಕ್ಕರೆ ದೇವಾಲಯದ ಬಾಗಿಲು ಮುಚ್ಚುವುದಾಗಿ ದೃಢವಾಗಿ ಹೇಳಿದತಂತ್ರಿ (ಪ್ರಧಾನ ಅರ್ಚಕ)
* ಹಿಂದಕ್ಕೆ ಹೋಗುವಂತೆ ತಂತ್ರಿಯಿಂದ ಮಹಿಳೆಯರ ಮನವೊಲಿಕೆ
* ಪರಿಸ್ಥಿತಿ ಬಹಳ ಬಿಗುವಿನಿಂದ ಕೂಡಿದೆ ಎಂಬ ವಿಚಾರವನ್ನು ಮಹಿಳೆಯರಿಗೆ ಮನದಟ್ಟು ಮಾಡಿದಪೊಲೀಸರು
ಇದನ್ನೂಓದಿ:ಗಿರಿಗೆ ನಾರಿ: ದುರ್ಗಮ ದಾರಿ
**
ಬಲಪ್ರಯೋಗ ಇಲ್ಲ
ಪ್ರತಿಭಟನೆ ನಡೆಸುತ್ತಿರುವ ಅಯ್ಯಪ್ಪ ಭಕ್ತರನ್ನು ಬಲಪ್ರಯೋಗಿಸಿ ತೆರವು ಮಾಡಲು ಸರ್ಕಾರ ಸಿದ್ಧವಿಲ್ಲ ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.
ಶಬರಿಮಲೆಯ ತುದಿಯವರೆಗೆ ಹೋದ ಒಬ್ಬ ಮಹಿಳೆ ಸಾಮಾಜಿಕ ಕಾರ್ಯಕರ್ತೆ ಎಂದು ಗೊತ್ತಾಗಿದೆ. ಶಬರಿಮಲೆಯು ಹೋರಾಟ ಅಥವಾ ಶಕ್ತಿ ಪ್ರದರ್ಶನದ ಸ್ಥಳ ಅಲ್ಲ. ಶಬರಿಮಲೆಗೆ ಹೋಗುವ ಮಹಿಳೆಯರ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ತೀರ್ಪನ್ನು ಜಾರಿಗೆ ತರುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ಇದೆ. ಭಕ್ತರಿಗೆ ರಕ್ಷಣೆ ಕೊಡಲು ಸರ್ಕಾರ ಸನ್ನದ್ಧವಾಗಿದೆಯೇ ಹೊರತು ಹೋರಾಟಗಾರರಿಗೆ ಅಲ್ಲ ಎಂದು ಅವರು ಹೇಳಿದ್ದಾರೆ.
**
ಬಿಕ್ಕಟ್ಟು ಪರಿಹರಿಸಲು ‘ಸುಪ್ರೀಂ’ಗೆ ಕೋರಿಕೆ
ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಯತ್ನಿಸಿದಾಗ ಉಂಟಾದ ಪರಿಸ್ಥಿತಿಯ ಬಗ್ಗೆ ವಿವರವಾದ ವರದಿ ತಯಾರಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು. ಬಿಕ್ಕಟ್ಟು ಶಮನಕ್ಕೆ ದಾರಿ ತೋರಿಸುವಂತೆ ಕೋರಲಾಗುವುದು ಎಂದು ಶಬರಿಮಲೆ ದೇವಾಲಯದ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷ ಪದ್ಮಕುಮಾರ್ ತಿಳಿಸಿದ್ದಾರೆ.
ಈಗ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕಾಗಿ ಇದೇ ರೀತಿಯ ವರದಿಯನ್ನು ಕೇರಳ ಹೈಕೋರ್ಟ್‌ಗೆ ಕೂಡ ಸಲ್ಲಿಸಲಾಗುವುದು. ಈ ವಿಚಾರದಲ್ಲಿ ಟಿಡಿಬಿ ಯಾವುದೇ ರಾಜಕೀಯ ಮಾಡುವುದಿಲ್ಲ, ಬಿಕ್ಕಟ್ಟು ಪರಿಹಾರವೇ ಟಿಡಿಬಿಯ ಉದ್ದೇಶ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವ ಅರ್ಜಿ ಸಲ್ಲಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಪದ್ಮಕುಮಾರ್, ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಎಲ್ಲ ಅರ್ಜಿಗಳಲ್ಲಿ ಟಿಡಿಬಿಯೇ ಪ್ರತಿವಾದಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.