ADVERTISEMENT

ಜಮ್ಮು ಮತ್ತು ಕಾಶ್ಮೀರ: ಭಾರಿ ಪ್ರಮಾಣದ ಮತದಾನ ನಿರೀಕ್ಷೆ

ಪ್ರಜಾವಾಣಿ ವಿಶೇಷ
Published 17 ಸೆಪ್ಟೆಂಬರ್ 2024, 22:37 IST
Last Updated 17 ಸೆಪ್ಟೆಂಬರ್ 2024, 22:37 IST
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಮತದಾನದ ಹಿಂದಿನ ದಿನವಾದ ಮಂಗಳವಾರ ಮತಗಟ್ಟೆ ಅಧಿಕಾರಿಗಳು ತಮಗೆ ವಹಿಸಲಾಗಿರುವ ಮತಗಟ್ಟೆಗಳಿಗೆ ತೆರಳಿದರು. –ಪಿಟಿಐ ಚಿತ್ರ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಮತದಾನದ ಹಿಂದಿನ ದಿನವಾದ ಮಂಗಳವಾರ ಮತಗಟ್ಟೆ ಅಧಿಕಾರಿಗಳು ತಮಗೆ ವಹಿಸಲಾಗಿರುವ ಮತಗಟ್ಟೆಗಳಿಗೆ ತೆರಳಿದರು. –ಪಿಟಿಐ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರಕ್ಕೆ ತೆರೆಬಿದ್ದಿದೆ. ಮೊದಲ ಹಂತದಲ್ಲಿ 24 ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಲಿದೆ. ಅರ್ಹ ಮತದಾರರು ಭಾರಿ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸುವ ನಿರೀಕ್ಷೆ ಇದೆ.

ಒಂದು ದಶಕದ ಅವಧಿಯಲ್ಲಿ ಇಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದು ಇದೇ ಮೊದಲು. ಕಣಿವೆ ರಾಜ್ಯಕ್ಕೆ ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು 2019ರ ಆಗಸ್ಟ್‌ನಲ್ಲಿ ಹಿಂಪಡೆದು, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು.

ಚುನಾವಣೆಯು ಇಲ್ಲಿನ ಜನರಿಗೆ ತಮ್ಮದೇ ಆದ ವಿಧಾನಸಭೆ ಹಾಗೂ ಸರ್ಕಾರವನ್ನು ಹೊಂದಲು ಅನುವು ಮಾಡಿಕೊಡಲಿದೆ. ಹಲವು ವಾರಗಳಿಂದ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ರಾಜಕೀಯ ರ್‍ಯಾಲಿಗಳು ನಡೆದಿವೆ, ರಾಜಕೀಯ ಪಕ್ಷಗಳು ಹಲವು ಭರವಸೆಗಳನ್ನು ನೀಡಿವೆ.

ADVERTISEMENT

ಪ್ರತಿ ಅಭ್ಯರ್ಥಿಯೂ ಮತದಾರರ ಗಮನ ಸೆಳೆಯಲು ಯತ್ನ ನಡೆಸಿದ್ದು, ಇಲ್ಲಿನ ಬೀದಿಗಳು ಚುನಾವಣೆಗೆ ಸಂಬಂಧಿಸಿದ ಬ್ಯಾನರ್, ಧ್ವಜಗಳು, ಪೋಸ್ಟರ್‌ಗಳಿಂದ ಅಲಂಕೃತಗೊಂಡಿವೆ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆಲ್ಲ ಪ್ರಚಾರ ಅಭಿಯಾನದ ತೀವ್ರತೆಯೂ ಹೆಚ್ಚಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು.

ಚುನಾವಣೆಗಳಿಗೆ ಮಾನ್ಯತೆಯೇ ಇಲ್ಲ ಎಂದು ಈ ಹಿಂದೆ ಭಾವಿಸಿದ್ದ ಕೆಲವು ಪ್ರತ್ಯೇಕತಾವಾದಿ ನಾಯಕರು ಕೂಡ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿ ಇದ್ದಾರೆ. ಸ್ಥಳೀಯರ ಪೈಕಿ ಹಲವರು ಈ ಚುನಾವಣೆಯನ್ನು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಅವಕಾಶ ಎಂದಷ್ಟೇ ಭಾವಿಸಿಲ್ಲ. ಬದಲಿಗೆ, 2019ರಲ್ಲಿ ತರಲಾದ ಬದಲಾವಣೆಗಳಿಗೆ ಪ್ರತಿರೋಧ ದಾಖಲಿಸುವ ಒಂದು ಅವಕಾಶ ಎಂದೂ ಅವರು ಭಾವಿಸಿದ್ದಾರೆ.

‘ಅಧಿಕಾರಶಾಹಿಯ ಆಡಳಿತದಿಂದ ನಮಗೆ ಬಿಡುಗಡೆ ಬೇಕಾಗಿದೆ’ ಎಂದು ಅಂಗಡಿಯೊಂದರ ಮಾಲೀಕ ಆರಿಫ್ ಅಹಮದ್ ಹೇಳುತ್ತಾರೆ. ‘ಬಿಜೆಪಿ ನೇತೃತ್ವದ ಸರ್ಕಾರದ ಪ್ರಜಾತಂತ್ರ ವಿರೋಧಿ ಕ್ರಮವನ್ನು ನಾವು ಮತದಾನದ ಮೂಲಕ ವಿರೋಧಿಸಲು ಬಯಸುತ್ತೇವೆ’ ಎಂದು ಅವರು ಹೇಳಿದರು.

ಇದೇ ಬಗೆಯ ಅಭಿಪ್ರಾಯವನ್ನು ಗೃಹಿಣಿ ಶಬೀನಾ ವ್ಯಕ್ತಪಡಿಸಿದರು. ‘ಕಳೆದ 30 ವರ್ಷಗಳಲ್ಲಿ ನಮ್ಮ ಕುಟುಂಬದಲ್ಲಿ ಯಾರೂ ಮತ ಚಲಾಯಿಸಿಲ್ಲ. ಆದರೆ ಈ ಬಾರಿ, ಕಾಶ್ಮೀರಿಗಳ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಂಡ ಕೇಂದ್ರದ ವಿರುದ್ಧ ಪ್ರತಿಭಟಿಸಲು ನಾವೆಲ್ಲ ಮತ ಚಲಾಯಿಸಲಿದ್ದೇವೆ’ ಎಂದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ಕೊಡಿಸುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷವು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದು, ಮುಂದೆ ಇಲ್ಲಿ ಸರ್ಕಾರ ರಚಿಸಲು ಈ ಮೈತ್ರಿಕೂಟವು ಪ್ರಬಲ ಪೈಪೋಟಿ ನೀಡುತ್ತಿದೆ.

ಜಮ್ಮು ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ. 2014ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಈ ಭಾಗದ 37 ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಗೆದ್ದಿತ್ತು. ಬಹುಮತ ಪಡೆಯಲು ಬಿಜೆಪಿಯು ಸಣ್ಣ ಪಕ್ಷಗಳಾದ ಪೀಪಲ್ಸ್ ಕಾನ್ಫರೆನ್ಸ್, ಅಪ್ನಿ ‍ಪಾರ್ಟಿಯನ್ನು ನೆಚ್ಚಿಕೊಳ್ಳಬೇಕಾಗಬಹುದು.

ಎರಡನೆಯ ಹಾಗೂ ಮೂರನೆಯ ಹಂತದ ಮತದಾನವು ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ನಡೆಯಲಿದೆ. ಮತ ಎಣಿಕೆಯು ಅಕ್ಟೋಬರ್ 8ಕ್ಕೆ ನಿಗದಿಯಾಗಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.