ನವದೆಹಲಿ: ಕರ್ನಾಟಕ, ತೆಲಂಗಾಣ, ತಮಿಳುನಾಡು ಮತ್ತು ದೆಹಲಿಯಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣವು ಈಶಾನ್ಯ ಹಾಗೂ ಪೂರ್ವ ಭಾಗದ ರಾಜ್ಯಗಳಲ್ಲಿನ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ನಡೆಸಿರುವ ಅಧ್ಯಯನವೊಂದು ಹೇಳಿದೆ.
ಈ ಕಾಯಿಲೆಯ ಪ್ರಮಾಣವು ದೇಶದಲ್ಲಿ 2025ರ ಸುಮಾರಿಗೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಾಣಲಿದೆ ಎಂದು ಅಧ್ಯಯನವು ಅಂದಾಜು ಮಾಡಿದೆ.
ಅಧ್ಯಯನ ವರದಿಯನ್ನು ಈಚೆಗೆ ಪ್ರಕಟಿಸಲಾಗಿದೆ. 2012ರಿಂದ 2016ರ ನಡುವಿನ ಅವಧಿಯಲ್ಲಿ ರಾಜ್ಯಗಳ ಮಟ್ಟದಲ್ಲಿ ವರದಿಯಾದ ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಈ ಅಧ್ಯಯನವು ಪರಿಗಣಿಸಿದೆ. ಕಾಯಿಲೆಯ ಕಾರಣದಿಂದಾಗಿ ವ್ಯಕ್ತಿಯು ಕಳೆದುಕೊಂಡ ಜೀವಿತಾವಧಿ (ವೈಎಲ್‌ಎಲ್), ವೈಕಲ್ಯಕ್ಕೆ ತುತ್ತಾಗಿ ಕಳೆದ ಜೀವಿತಾವಧಿ (ವೈಎಲ್‌ಡಿ) ಮತ್ತು ಅಂಗವೈಕಲ್ಯ ಹಾಗೂ ಸಾವಿನಿಂದಾಗಿ ಕಳೆದುಕೊಂಡ ಆಯಸ್ಸನ್ನು (ಡಿಎಎಲ್‌ವೈ) ಆಧರಿಸಿ ಈ ಅಧ್ಯಯನವು 2025ರ ವೇಳೆಗೆ ಎದುರಾಗುವ ಕಾಯಿಲೆಯ ಹೊರೆಯನ್ನು ಅಂದಾಜು ಮಾಡಿದೆ.
2016ರಲ್ಲಿ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಹೊರೆಯು ಪ್ರತಿ ಒಂದು ಲಕ್ಷ ಮಂದಿಗೆ 515.6 ಡಿಎಎಲ್‌ವೈ ಎಂದು ಅಧ್ಯಯನವು ಅಂದಾಜಿಸಿದೆ. ಮಹಿಳೆಯರನ್ನು ವಿವಿಧ ವಯಸ್ಸುಗಳ ಗುಂಪುಗಳಲ್ಲಿ ವಿಭಜಿಸಿ ಈ ಅಂದಾಜು ಮಾಡಲಾಗಿದೆ.
‘ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ದೆಹಲಿಯಲ್ಲಿ ಕ್ಯಾನ್ಸರ್ ಹೊರೆಯು ಈಶಾನ್ಯ ಭಾಗದ ಮತ್ತು ಪೂರ್ವ ಭಾಗದ ರಾಜ್ಯಗಳಿಗಿಂತ ಹೆಚ್ಚಾಗಿದೆ. 2025ರ ವೇಳೆಗೆ ಕ್ಯಾನ್ಸರ್ ಹೊರೆಯು 56 ಲಕ್ಷ ಡಿಎಎಲ್‌ವೈಗೆ ಏರಿಕೆ ಆಗಲಿದೆ’ ಎಂದು ಐಸಿಎಂಆರ್ ಅಧ್ಯಯನ ಹೇಳಿದೆ.
ಜನಸಂಖ್ಯೆ ಆಧಾರಿತ 28 ಕ್ಯಾನ್ಸರ್ ಮಾಹಿತಿ ಕೇಂದ್ರಗಳಿಂದ ಪಡೆದ ದತ್ತಾಂಶವನ್ನು ಈ ವರದಿಯು ಅಧ್ಯಯನಕ್ಕೆ ಬಳಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.