ನವದೆಹಲಿ: ಅಮೇರಿಕ ಮತ್ತು ಭಾರತವು ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲೀನ ಸಂಬಂಧವನ್ನು ಹೊಂದಿವೆ. ಇದಕ್ಕೆ ಅನುಗುಣವಾಗಿ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ ಗರಿಷ್ಠ!
ಶಾಲಾ ಶಿಕ್ಷಣದಿಂದ ಹಿಡಿದು ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ವಿದ್ಯಾರ್ಥಿಗಳ ದ್ವಿಮುಖ ಸಂಚಾರ ಉತ್ತೇಜಿಸುವವರೆಗೆ ವ್ಯಾಪಕ ಶ್ರೇಣಿಯ ಉಪಕ್ರಮಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಉಭಯ ದೇಶಗಳು ಮುಂದುವರಿಸಿವೆ.
ಈ ನಿರಂತರ ಸಹಕಾರವು ಈಗ ವಿಮೆನ್ ಇನ್ ಸ್ಟೆಮ್ ಫೆಲೋಶಿಪ್ (Women in STEMM) (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮೆಥಮ್ಯಾಟಿಕ್ಸ್ ಮತ್ತು ಮೆಡಿಸಿನ್) ಯೋಜನೆಯ ಆರಂಭದೊಂದಿಗೆ ಇನ್ನಷ್ಟು ವಿಸ್ತರಿಸುತ್ತಿದೆ ಎಂದು ಯೋಜನೆಯ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆ ವೃತ್ತಿಯಲ್ಲಿ ಪ್ರಾರಂಭಿಕ ಹಂತದಲ್ಲಿರುವ ಭಾರತದ ಮಹಿಳಾ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಅವರ STEMM ಕ್ಷೇತ್ರಗಳಲ್ಲಿ ನೇತಾರನನ್ನಾಗಿಸಲು ಸಬಲಗೊಳಿಸುವುದು ಮತ್ತು ಅಗತ್ಯ ಬೆಂಬಲ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದೆ.
ಇತ್ತೀಚಿನ ಓಪನ್ ಡೋರ್ಸ್ ವರದಿಯನ್ನು ಪ್ರಸ್ತಾಪಿಸಿದ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು, 2009 ರಿಂದ ಇದೇ ಮೊದಲ ಬಾರಿಗೆ, ಭಾರತವು ಯಾವುದೇ ದೇಶಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕಳುಹಿಸಿದೆ ಎಂದಿರುವುದನ್ನು ಹೇಳಿದೆ. 2023/2024 ರಲ್ಲಿ 3,30,000 ಕ್ಕೂ ಹೆಚ್ಚು ಭಾರತೀಯರು ಅಮೇರಿಕದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು, ಇದು ಹಿಂದಿನ ವರ್ಷಕ್ಕಿಂತ 23 ಪ್ರತಿಶತ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಪದವೀಧರ ದಾಖಲಾತಿ: ಸುಮಾರು 1,97,000 ವಿದ್ಯಾರ್ಥಿಗಳು-ಕಳೆದ ವರ್ಷಕ್ಕಿಂತ 19 ಪ್ರತಿಶತ ಹೆಚ್ಚಳದೊಂದಿಗೆ ಅಮೆರಿಕದಲ್ಲಿ ಪದವೀಧರ ವಿದ್ಯಾಭ್ಯಾಸಕ್ಕೆ ದಾಖಲಾಗಿದ್ದಾರೆ.
ಐಚ್ಛಿಕ ಪ್ರಾಯೋಗಿಕ ತರಬೇತಿ (OPT): OPT ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯು ಶೇಕಡಾ 41 ರಷ್ಟು ಏರಿಕೆಯಾಗಿ 97,556 ಕ್ಕೆ ತಲುಪಿದೆ.
ಪದವಿಪೂರ್ವ ದಾಖಲಾತಿ: ಭಾರತದಿಂದ ಅಮೆರಿಕಕ್ಕೆ ಪದವಿಪೂರ್ವ ವ್ಯಾಸಂಗಕ್ಕೆ ತೆರಳುವವರ ಸಂಖ್ಯೆ 13 ಪ್ರತಿಶತದಷ್ಟು ಏರಿಕೆಯಾಗಿದ್ದು, 36,000 ವಿದ್ಯಾರ್ಥಿಗಳಿದ್ದಾರೆ.
ಈ ವರ್ಷದ ಓಪನ್ ಡೋರ್ಸ್ ವರದಿಯು ಅಮೆರಿಕದ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುವ ತಾಣವಾಗಿ ಭಾರತವನ್ನು ಆಯ್ಕೆ ಮಾಡುವಲ್ಲಿ 300 ಪ್ರತಿಶತದಷ್ಟು ಹೆಚ್ಚಳವನ್ನು ತೋರಿಸುತ್ತದೆ.
ಓಪನ್ ಡೋರ್ಸ್ ವರದಿಯ ಬಿಡುಗಡೆಯು ಅಂತರಾಷ್ಟ್ರೀಯ ಶಿಕ್ಷಣ ವಾರದ (IEW) ಆರಂಭವಾಗಿದ್ದು, ಇದು ಅಂತರರಾಷ್ಟ್ರೀಯ ಶಿಕ್ಷಣ ಮತ್ತು ವಿಶ್ವಾದ್ಯಂತ ವಿನಿಮಯದ ಪ್ರಯೋಜನಗಳ ಸಂಭ್ರಮಾಚರಣೆಯಾಗಿದೆ.
STEMM ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಯಭಾರಿ ಗಾರ್ಸೆಟ್ಟಿ, "ಇಂದು ನಾವು ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಅಮೇರಿಕ-ಭಾರತ ಒಕ್ಕೂಟದ ಉಪಕ್ರಮವಾದ "ವಿಮೆನ್ ಇನ್ STEM ಡೆವಲಪ್‌ಮೆಂಟ್ ಮತ್ತು ಮೆಡಿಸಿನ್ ಫೆಲೋಶಿಪ್ ಅನ್ನು ಪ್ರಾರಂಭಿಸಲು ಒಟ್ಟುಗೂಡಿದ್ದೇವೆ. ಈ ಕಾರ್ಯಕ್ರಮವು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಮತ್ತು ವೈದ್ಯಕೀಯ (STEMM) ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣ, ಸಹಯೋಗ ಮತ್ತು ಲಿಂಗ ಸಮಾನತೆಯ ಜಾಗತಿಕ ಪ್ರಾಮುಖ್ಯತೆಯನ್ನು ನೆನಪಿಸುತ್ತದೆ ಎಂದಿದ್ದಾರೆ.
ರಾಜಸ್ಥಾನದ ಬರಾನ್ ಮತ್ತು ತೆಲಂಗಾಣದ ಭೂಪಾಲಪಲ್ಲಿ ಜಿಲ್ಲೆಗಳಲ್ಲಿ ಮಕ್ಕಳು ಮತ್ತು ಕುಟುಂಬಗಳಿಗೆ ಮೂಲಭೂತ ಕಲಿಕೆ ಮತ್ತು ಸುರಕ್ಷಿತ ನೈರ್ಮಲ್ಯ ಅಭ್ಯಾಸಗಳನ್ನು ಹೆಚ್ಚಿಸಲು ಸೆಸೇಮ್ ವರ್ಕ್‌ಶಾಪ್ ಇಂಡಿಯಾ ಟ್ರಸ್ಟ್‌ನೊಂದಿಗೆ ಲರ್ನ್ ಪ್ಲೇ ಗ್ರೋ ಅನ್ನು ಪ್ರಾರಂಭಿಸುವುದರೊಂದಿಗೆ ಯು.ಎಸ್. ಏಜನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಅಂತರರಾಷ್ಟ್ರೀಯ ಶಿಕ್ಷಣ ವಾರವನ್ನು ಆಚರಿಸುತ್ತಿದೆ.
ವಿದ್ಯಾರ್ಥಿಗಳು ಕಾಲೇಜು ಅಪ್ಲಿಕೇಶನ್ ಪ್ರಕ್ರಿಯೆಯ ಕುರಿತು ಇತ್ತೀಚಿನ ಮಾಹಿತಿಗಾಗಿ, iOS ಮತ್ತು Android ಸಾಧನಗಳಲ್ಲಿ ಉಚಿತವಾಗಿ ಲಭ್ಯವಿರುವ EducationUSA ಇಂಡಿಯಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಯುನೈಟೆಡ್ ಸ್ಟೇಟ್ಸ್ನಲ್ಲಿ ಉನ್ನತ ಶಿಕ್ಷಣವನ್ನು ಯೋಜಿಸಲು ಇದು ತ್ವರಿತ ಮತ್ತು ಸುಲಭವಾದ ಮೊದಲ ಹೆಜ್ಜೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ https://educationusa.in/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.