ADVERTISEMENT

ಹಿಮಾಚಲ ಪ್ರದೇಶ ಉಪ ಚುನಾವಣೆ | ಸುಖು ‘ಛಲ’; ‘ಕೈ’ ಸರ್ಕಾರ ಸುಭದ್ರ

ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 23:30 IST
Last Updated 13 ಜುಲೈ 2024, 23:30 IST
ಸುಖ್ವಿಂದರ್‌ ಸಿಂಗ್ ಸುಖು
ಸುಖ್ವಿಂದರ್‌ ಸಿಂಗ್ ಸುಖು   

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡರಲ್ಲಿ ಜಯಭೇರಿ ಬಾರಿಸಿದೆ. ‘ಆಪರೇಷನ್‌ ಕಮಲ’ದ ಮೂಲಕ ‘ಕೈ’ ಸರ್ಕಾರ ಬುಡಮೇಲು ಮಾಡುವ ಪ್ರಯತ್ನ ನಡೆಸಿದ್ದ ಬಿಜೆಪಿಗೆ ಅಲ್ಲಿನ ಮತದಾರರು ಪಾಠ ಕಲಿಸಿದ್ದಾರೆ. ಈ ಗೆಲುವಿನಿಂದ ಕಾಂಗ್ರೆಸ್‌ ಸರ್ಕಾರಕ್ಕೆ ಕವಿದಿದ್ದ ಆತಂಕದ ಕಾರ್ಮೋಡ ದೂರವಾಗಿದೆ. 

ಉಪ ಚುನಾವಣೆಯ ಫಲಿತಾಂಶದಿಂದಾಗಿ ಪಕ್ಷದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಮತ್ತೆ ಬಿಗಿ ಹಿಡಿತ ಸಾಧಿಸಿದ್ದಾರೆ. ಭಿನ್ನಮತೀಯ ಚಟುವಟಿಕೆಗಳಿಗೆ ಚಿತಾವಣೆ ನೀಡಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಹಾಗೂ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರಿಗೆ ಮುಖಭಂಗವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಲ್ಲಿ ವಿಕ್ರಮಾದಿತ್ಯ ಸಿಂಗ್ ಪರಾಜಯ ಅನುಭವಿಸಿದ್ದರು. 

68 ಸದಸ್ಯ ಬಲದ ವಿಧಾನಸಭೆಗೆ 2022ರಲ್ಲಿ ನಡೆದ ಚುನಾವಣೆಯಲ್ಲಿ 40 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿತ್ತು. ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಿರಿಯ ಮುಖಂಡ ಅಭಿಷೇಕ್‌ ಮನುಸಿಂಘ್ವಿ ಅವರನ್ನು ಪಕ್ಷ ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಪಕ್ಷದ ವಿಪ್‌ ಉಲ್ಲಂಘಿಸಿ ಹಣಕಾಸು ಮಸೂದೆ ಪರ ಮತ ಚಲಾಯಿಸದ ಕಾರಣಕ್ಕೆ ಆರು ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಈ ಆರೂ ಮಂದಿ ಕಮಲ ಪಾಳಯಕ್ಕೆ ಸೇರಿದ್ದರು.

ADVERTISEMENT

ಲೋಕಸಭಾ ಚುನಾವಣೆಯ ಜತೆಗೆ ನಡೆದ ಆರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಲ್ಕರಲ್ಲಿ ಗೆದ್ದುಕೊಂಡಿತ್ತು. ಕಾಂಗ್ರೆಸ್‌ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೂವರು ಪಕ್ಷೇತರರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದರು. ಇದೀಗ ಡೆಹ್ರಾ ಹಾಗೂ ನಲಗಢ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಬಲ ಮತ್ತೆ 40ಕ್ಕೆ ಏರಿದೆ. 

‘ಹಿಮಾಚಲದ ಜನರು ಜನಶಕ್ತಿಯನ್ನು ಬೆಂಬಲಿಸುವ ಮೂಲಕ ಹಣಬಲವನ್ನು ಸೋಲಿಸಿದ್ದಾರೆ ಮತ್ತು ಬಿಜೆಪಿಯ ರಾಜಕೀಯ ಪಿತೂರಿಗೆ ತಕ್ಕ ಉತ್ತರ ನೀಡಿದ್ದಾರೆ. ಇದು ಜನರ ಗೆಲುವು. ದೇವಭೂಮಿಯ ದೇವರಂತಹ ಜನರಿಗೆ ನಾನು ನನ್ನ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸುಖು ಹೇಳಿದರು. 

ನಾಲ್ಕೂ ಸ್ಥಾನಗಳನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಲೋಕಸಭೆಯ ಫಲಿತಾಂಶ ನಿರಾಶೆ ತಂದಿದ್ದರೆ, ಉಪಚುನಾವಣೆ ಫಲಿತಾಂಶವು ಸುಖು ವಿರುದ್ಧದ ಬಂಡಾಯವನ್ನು ಹತ್ತಿಕ್ಕಲು ನೆರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.