ADVERTISEMENT

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: 53 ಮಂದಿ ನಾಪತ್ತೆ, ಮುಂದುವರಿದ ಕಾರ್ಯಾಚರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2024, 4:10 IST
Last Updated 3 ಆಗಸ್ಟ್ 2024, 4:10 IST
<div class="paragraphs"><p>ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಕುಲ್ಲಿ ಜಿಲ್ಲೆಯಲ್ಲಿ ಹರಿಯುವ ಬಿಯಾಸಿ ನದಿಯಲ್ಲಿ ಪ್ರವಾಹ ಉಂಟಾಗಿದೆ </p></div>

ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಕುಲ್ಲಿ ಜಿಲ್ಲೆಯಲ್ಲಿ ಹರಿಯುವ ಬಿಯಾಸಿ ನದಿಯಲ್ಲಿ ಪ್ರವಾಹ ಉಂಟಾಗಿದೆ

   

–ಪಿಟಿಐ ಚಿತ್ರ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದ ಉಂಟಾಗಿರುವ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವ 53 ಮಂದಿಯ ರಕ್ಷಣೆಗೆ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದೆ.

ADVERTISEMENT

ಹಿಮಾಚಲ ಪ್ರದೇಶದಲ್ಲಿನ ಮೇಘಸ್ಫೋಟ ಹಾಗೂ ಪ್ರವಾಹದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನದಿಗಳ ನೀರಿನ ಮಟ್ಟ ಅಪಾಯಕರ ರೀತಿಯಲ್ಲಿ ಏರಿಕೆಯಾಗಿದೆ.

ರಾಜ್ಯದ ಕುಲ್ಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಹಲವು ಮನೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಈ ಜಿಲ್ಲೆಗಳಲ್ಲಿನ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಕುಲ್ಲು ಜಿಲ್ಲೆಯ ಮಣಿಕರಣ್‌ನಲ್ಲಿರುವ ಮಲಾನಾ ವಿದ್ಯುತ್‌ ಯೋಜನೆ ಸ್ಥಳದಲ್ಲಿ ಸಿಲುಕಿದ್ದ 33 ಜನರನ್ನು ರಕ್ಷಣೆ ಮಾಡಲಾಗಿದೆ. ಮಳೆಯಿಂದಾಗಿ ಸ್ಥಳದಲ್ಲಿ ಗೋಡೆ ಮತ್ತು ಸುರಂಗ ಮಾರ್ಗಕ್ಕೆ ಹಾನಿಯಾಗಿದ್ದು, ನೀರು ನುಗ್ಗಿದೆ. ಆದರೂ ಸೇನೆ, ಎನ್‌ಡಿಆರ್‌ಎಫ್‌ ಸಿಬ್ಬಂದಿ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಲ್ಲು ಉಪ ವಿಭಾಗಾಧಿಕಾರಿ ತೋರುಲ್‌ ಎಸ್‌. ರವೀಶ್‌ ತಿಳಿಸಿದ್ದಾರೆ.

ಕುಲ್ಲು ಜಿಲ್ಲೆಯ ನಿರ್ಮಂಡ್, ಸೈಂಜ್‌ ಮತ್ತು ಮಲಾನಾ, ಮಂಡಿಯ ಪಧರ್‌ ಹಾಗೂ ಶಿಮ್ಲಾ ಜಿಲ್ಲೆಯ ರಾಮ್‌ಪುರಗಳಲ್ಲಿ ಸಂಭವಿಸಿದ ಮೇಘಸ್ಫೋಟವು ಹಠಾತ್‌ ಪ್ರವಾಹವನ್ನು ಸೃಷ್ಟಿಸಿದೆ.

ಸೇನೆ ಮತ್ತು ಎನ್‌ಡಿಆರ್‌ಎಫ್‌ ಸೇರಿದಂತೆ ಅನೇಕ ಪಡೆಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ಕಾಣೆಯಾದವರ ಪತ್ತೆಗಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಜೂನ್ 27ರಂದು ರಾಜ್ಯದಲ್ಲಿ ಮುಂಗಾರು ಪ್ರಾರಂಭವಾದಾಗಿನಿಂದ ಈವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ 77 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಆರೆಂಜ್‌ ಅಲರ್ಟ್‌ ಘೋಷಣೆ

‘ಮುಂದಿನ ನಾಲ್ಕು–ಐದು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ. ಮಂಡಿ, ಕುಲ್ಲು, ಚಂಬಾ ಹಾಗೂ ಕಾಂಗಢಾ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ’ ಎಂದು ಹವಾಮಾನತಜ್ಞ ಸಂದೀಪ್‌ ಶರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.