ADVERTISEMENT

18-60 ವಯಸ್ಸಿನ ಮಹಿಳೆಯರಿಗೆ ಈ ವರ್ಷದಿಂದಲೇ ಮಾಸಿಕ ₹1,500: ಹಿಮಾಚಲ ಸಿಎಂ

ಪಿಟಿಐ
Published 4 ಮಾರ್ಚ್ 2024, 16:46 IST
Last Updated 4 ಮಾರ್ಚ್ 2024, 16:46 IST
ಸುಖ್ವಿಂದರ್ ಸಿಂಗ್ ಸುಖು
ಸುಖ್ವಿಂದರ್ ಸಿಂಗ್ ಸುಖು   

ಶಿಮ್ಲಾ: 2024–25ರ ಹಣಕಾಸು ವರ್ಷದಿಂದಲೇ ಸರ್ಕಾರವು 18ರಿಂದ 60 ವರ್ಷ ವಯಸ್ಸಿನ ಮಹಿಳೆಯರಿಗೆ ಮಾಸಿಕ ₹1,500 ನೀಡಲಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಘೋಷಿಸಿದ್ದಾರೆ.

ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷವು ನೀಡಿದ್ದ 10 ಗ್ಯಾರಂಟಿಗಳ ಪೈಕಿ ಇದೂ ಸಹ ಒಂದಾಗಿದೆ.

‘ಇಂದಿರಾಗಾಂಧಿ ಪ್ಯಾರಿ ಬೆಹನಾ ಸುಖ್ ಸಮ್ಮಾನ್ ನಿಧಿ ಯೋಜನೆ’ಯಡಿ ವಾರ್ಷಿಕ ₹800 ಕೋಟಿ ವೆಚ್ಚ ಮಾಡಲಾಗುತ್ತದೆ. ಸುಮಾರು 5 ಲಕ್ಷ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

ಮಹಿಳೆಯರಿಗೆ ಮಾಸಿಕ ₹1,500 ನೀಡುವ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಮೂಲಕ 10 ಗ್ಯಾರಂಟಿಗಳ ಪೈಕಿ 5 ಗ್ಯಾರಂಟಿ ಪೂರ್ಣಗೊಳ್ಳಲಿವೆ. ಹಳೆ ಪಿಂಚಣಿ ಜಾರಿಯು 1.36 ಲಕ್ಷ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದೂ ಹೇಳಿದ್ದಾರೆ.

ಬಜೆಟ್‌ನಲ್ಲಿ ಯೋಜನೆ ಘೋಷಿಸುವ ಇಚ್ಛೆ ಹೊಂದಿದ್ದೆ. ಆದರೆ, ಗದ್ದಲದಿಂದಾಗಿ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಸಿಎಂ ಘೋಷಣೆ ಮತ್ತೊಂದು ಸುಳ್ಳು ಎಂದು ಜರಿದಿರುವ ವಿಪಕ್ಷ ನಾಯಕ ಜೈರಾಮ್ ಠಾಕೂರ್, ಬಜೆಟ್‌ನಲ್ಲಿ ಈ ಯೋಜನೆಗೆ ಅವಕಾಶವೇ ಇಲ್ಲ. ಏಪ್ರಿಲ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಮಹಿಳೆಯರಿಗೆ ಹೇಗೆ ಹಣ ನೀಡಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ 18ರಿಂದ 60 ವರ್ಷ ವಯಸ್ಸಿನ 22 ಲಕ್ಷ ಮಹಿಳೆಯರಿಗೆ ತಲಾ ₹ 1,500 ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಸದ್ಯ, ಸಾಮಾಜಿಕ ಕಲ್ಯಾಣ ಯೋಜನೆಯ ಫಲಾನುಭವಿಗಳಾಗಿರುವ 4.55 ಲಕ್ಷ ಮಹಿಳೆಯರಿಗೆ ಮಾತ್ರ ಈ ಹಣ ಸಿಗಲಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.