ADVERTISEMENT

ಹಿಮಾಚಲ ಪ್ರದೇಶ | ‘ಕದನ ವಿರಾಮ’ ತಾತ್ಕಾಲಿಕ: ಕೇಂದ್ರ ನಾಯಕರಿಗೆ ಸಂದೇಶ

ಹಿಮಾಚಲ ಪ್ರದೇಶ: ಪಕ್ಷಕ್ಕೆ ದ್ರೋಹ ಬಗೆದವರು ಬೆಲೆ ತೆರುತ್ತಾರೆ: ಮುಖ್ಯಮಂತ್ರಿ ಸುಖು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 15:54 IST
Last Updated 1 ಮಾರ್ಚ್ 2024, 15:54 IST
ಪ್ರತಿಭಾ ಸಿಂಗ್
ಪ್ರತಿಭಾ ಸಿಂಗ್   

ನವದೆಹಲಿ: ಬಂಡಾಯವೆದ್ದಿದ್ದ 6 ಶಾಸಕರನ್ನು ಅನರ್ಹಗೊಳಿಸಿ, ಪತನದ ಅಂಚಿಗೆ ಹೋಗಿದ್ದ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದ್ದರೂ ಒಳಬೇಗುದಿ ಇನ್ನೂ ಶಮನವಾಗಿಲ್ಲ.

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಬಂಡಾಯ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನೊಂದೆಡೆ, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಹಾಗೂ ಅವರ ಪುತ್ರ, ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರು, ಈಗಿನ ‘ಕದನ ವಿರಾಮ’ ತಾತ್ಕಾಲಿಕ ಎಂಬ ಮಾತನ್ನು ಪಕ್ಷದ ನಾಯಕತ್ವಕ್ಕೆ ಶುಕ್ರವಾರ ಮತ್ತೊಮ್ಮೆ ರವಾನಿಸಿದ್ದಾರೆ.

ಹೀಗಾಗಿ, ಮುಖ್ಯಮಂತ್ರಿ ಸುಖು ಹಾಗೂ ವಿಕ್ರಮಾದಿತ್ಯ ಸಿಂಗ್‌ ನಡುವಿನ ತಿಕ್ಕಾಟ ಇನ್ನೂ ತಣಿದಿಲ್ಲ ಎನ್ನುವಂತಾಗಿದೆ.

ADVERTISEMENT

ಸೋಲನ್ ಜಿಲ್ಲೆಯ ಕಸೌಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಧರಂಪುರ ಎಂಬಲ್ಲಿ ಶುಕ್ರವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸುಖು, ‘ಕಾಂಗ್ರೆಸ್‌ನ ಕೆಲ ಶಾಸಕರು ತಮ್ಮ ಆತ್ಮಸಾಕ್ಷಿಯನ್ನೇ ಮಾರಾಟ ಮಾಡಿಕೊಂಡಿದ್ದಾರೆ. ಪಕ್ಷದ ನಿಯಮಗಳಿಗೆ ವಿರುದ್ಧವಾಗಿ ಅಡ್ಡಮತ ಹಾಕಿರುವ ಇವರು ಬೆಲೆ ತೆರುತ್ತಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಪಕ್ಷಕ್ಕೆ ದ್ರೋಹ ಬಗೆದು, ತಮ್ಮನ್ನು ಆಯ್ಕೆ ಮಾಡಿದ ಜನರ ಭಾವನೆಗಳೊಂದಿಗೆ ಆಟವಾಡಿದವರಿಗೆ ದೇವರು ಶಿಕ್ಷಿಸದೇ ಬಿಡುವುದಿಲ್ಲ’ ಎಂದೂ ಹೇಳಿದ್ದಾರೆ.

ಬಿಜೆಪಿ ವಿರುದ್ಧವೂ ಟೀಕಾಪ್ರಹಾರ ನಡೆಸಿದ ಅವರು, ‘ರಾಜ್ಯದಲ್ಲಿ ಭ್ರಷ್ಟಾಚಾರ ಮಟ್ಟ ಹಾಕುವ ಜೊತೆಗೆ, ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿರುವುದು ಬಿಜೆಪಿಯವರನ್ನು ಕಂಗೆಡಿಸಿದೆ’ ಎಂದರು.

‘ರಾಜ್ಯದ ಸಂಪತ್ತನ್ನು ಯಾವುದೇ ಕಾರಣಕ್ಕೂ ಲೂಟಿ ಮಾಡಲು ಬಿಡುವುದಿಲ್ಲ. ನನ್ನ ಜನರೇ ನನ್ನ ಶಕ್ತಿ. ನನ್ನ ಕೊನೆ ಉಸಿರುವವರೆಗೂ ನನ್ನ ಜನರ ಸೇವೆ ಮಾಡಲು ಬದ್ಧ’ ಎಂದು ಹೇಳಿದ್ದಾರೆ.

ಸಂದೇಶ ರವಾನೆ: ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಹಾಗೂ ಅವರ ಪುತ್ರ, ಸಚಿವ ವಿಕ್ರಮಾದಿತ್ಯ ಅವರು, ಅನರ್ಹಗೊಂಡಿರುವ ಪಕ್ಷದ 6 ಶಾಸಕರನ್ನು ಹರಿಯಾಣದ ಪಂಚಕುಲದಲ್ಲಿ ಶುಕ್ರವಾರ ಭೇಟಿ ಮಾಡಿದ್ದಾರೆ.

‘ಪಕ್ಷದ ಕೇಂದ್ರ ನಾಯಕತ್ವದ ಮಧ್ಯಪ್ರವೇಶದಿಂದ ರಾಜ್ಯ ಘಟಕದಲ್ಲಿನ ಈ ಕದನ ವಿರಾಮ ತಾತ್ಕಾಲಿಕ. ನನ್ನ ಬಣದ ಅಹವಾಲುಗಳಿಗೆ ತ್ವರಿತವಾಗಿ ಪರಿಹಾರ ನೀಡಬೇಕು’ ಎಂಬ ಸಂದೇಶ ರವಾನಿಸುವ ಪ್ರಯತ್ನವನ್ನು ಪ್ರತಿಭಾ ಸಿಂಗ್‌ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಅನರ್ಹಗೊಂಡಿರುವ ಶಾಸಕರನ್ನು ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಿರುವುದಾಗಿ ವಿಕ್ರಮಾದಿತ್ಯ ನನಗೆ ತಿಳಿಸಿದ್ದಾರೆ. ಮುಂದೆ ಯಾವ ಬೆಳವಣಿಗೆಗಳು ಆಗುತ್ತವೆ ಎಂದು ಕಾದು ನೋಡೋಣ. ಸದ್ಯಕ್ಕಂತೂ ನನ್ನ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಮತ್ತೊಂದೆಡೆ, ಪ್ರತಿಭಾ ಸಿಂಗ್‌ ಅವರು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ್ದು, ‘ಬರುವ ದಿನಗಳಲ್ಲಿ ಏನಾಗಲಿದೆ ಎಂಬುದು ದೇವರಿಗೇ ಗೊತ್ತು’ ಎನ್ನುವ ಮೂಲಕ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸುಖ್ವಿಂದರ್‌ ಸಿಂಗ್‌ ಸುಖು
ಅನರ್ಹಗೊಂಡಿರುವ ಶಾಸಕರು ಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿರುವುದರಲ್ಲಿ ತಪ್ಪು ಇಲ್ಲ. ನ್ಯಾಯಕ್ಕಾಗಿ ಹೋರಾಡುವುದು ಅವರ ಹಕ್ಕು
ಪ್ರತಿಭಾ ಸಿಂಗ್‌ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ

‘ವೀಕ್ಷಕರ ಮಾತಿಗೆ ಮಹತ್ವ ಇದೆಯೇ?’

ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ನೇತೃತ್ವದ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂಬುದಾಗಿ ಪಕ್ಷದ ವೀಕ್ಷಕರು ಪ್ರತಿಪಾದಿಸಿದ್ದರೂ ಪ್ರತಿಭಾ ಸಿಂಗ್‌ ಅವರ  ಮಾತಿಗೆ ಹೆಚ್ಚಿನ ಮಹತ್ವ ನೀಡಿಲ್ಲ ಎಂದೂ ಹೇಳಲಾಗುತ್ತಿದೆ. ‘ವೀಕ್ಷಕರು ಮಾತಿಗೆ ಮಹತ್ವದ ಇದೆಯೇ? ಸುಖು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ವೀಕ್ಷಕರು ಬಯಸುತ್ತಾರೆ. ಆದರೆ ಅಂತಿಮವಾಗಿ ಜನರ ಅಪೇಕ್ಷೆ ಏನಿದೆ ಹಾಗೂ ಮುಂದೆ ಏನಾಗಲಿದೆ ಎಂಬುದು ಮುಖ್ಯ’ ಎಂದು ಹೇಳುವ ಮೂಲಕ ಪ್ರತಿಭಾ ಸಿಂಗ್‌ ಅವರು ಸುಖು ನೇತೃತ್ವದ ಸರ್ಕಾರದ ಮೇಲೆ ಅನಿಶ್ಚಿತತೆ ಕತ್ತಿ ತೂಗುತ್ತಿರುವುದು ನಿಂತಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.