ಶಿಮ್ಲಾ: ದಿಢೀರ್ ಪ್ರವಾಹ ಮತ್ತು ಭೂಕುಸಿತದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದ ಚಂಡೀಗಢ– ಮನಾಲಿ ರಾಷ್ಟ್ರೀಯ ಹೆದ್ದಾರಿಯನ್ನು 24 ತಾಸುಗಳ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನ ಸಂಚಾರ ಸ್ಥಗಿತಗೊಂಡಿದ್ದ ಕಾರಣ ಪ್ರವಾಸಿಗರು ಸೇರಿದಂತೆ ನೂರಾರು ಮಂದಿ ಪ್ರಯಾಣಿಕರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದಲೇ ಸಿಲುಕಿಕೊಂಡಿದ್ದರು. ಮಂಡಿ–ಪಾಂಡೋಹ್–ಕುಲ್ಲು ರಸ್ತೆಯಲ್ಲಿ ಆರು ಮೈಲಿ ದೂರದವರೆಗೆ ವಾಹನಗಳು ಸಿಲುಕಿಕೊಂಡಿದ್ದವು ಎಂದಿದ್ದಾರೆ.
ಹಿಮಾಚಲ ಪ್ರದೇಶದ ವಿವಿಧೆಡೆ ಸಾಧಾರಣ ಮಳೆ ಮುಂದುವರಿದಿದ್ದು, ಇದೇ 28 ಮತ್ತು 29ರಂದು ಕೆಲವೆಡೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ಮಳೆ ಸಂಬಂಧಿ ಅವಘಡಗಳಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.