ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆಯ ಒಟ್ಟು 68 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಫಲಿತಾಂಶವನ್ನು ಬಂಡಾಯಗಾರರು ಬುಡಮೇಲು ಮಾಡಿದ್ದಾರೆ. ಅಂತಿಮವಾಗಿ ಬಿಜೆಪಿಯ 8 ಸ್ಥಾನ ಹಾಗೂ ಕಾಂಗ್ರೆಸ್‌ನ 4 ಸ್ಥಾನಗಳ ಗೆಲುವಿಗೆ ತಣ್ಣೀರೆರೆಚಿದ್ದಾರೆ. ಈ ಮೂಲಕ ರಾಜ್ಯದ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುವಲ್ಲಿ ಯಶ ಕಂಡಿದ್ದಾರೆ.
ಕಣದಲ್ಲಿದ್ದ 99 ಸ್ವತಂತ್ರ ಅಭ್ಯರ್ಥಿಗಳ ಪೈಕಿ 28 ಬಂಡಾಯ ಅಭ್ಯರ್ಥಿಗಳಾಗಿದ್ದರು. ಗೆದ್ದ ಮೂವರು ಸ್ವತಂತ್ರ ಅಭ್ಯರ್ಥಿಗಳಾದ ನಾಲಾಗಢ ಕ್ಷೇತ್ರದ ಕೆ.ಎಲ್.ಠಾಕೂರ್, ಡೆಹ್ರಾದ ಹೋಶಿಯರ್ ಸಿಂಗ್ ಮತ್ತು ಹಮೀರಪುರದ ಆಶಿಶ್ ಶರ್ಮ ಅವರು ಬಿಜೆಪಿಯಿಂದ ಟಿಕೆಟ್ ವಂಚಿತರು. ಪಕ್ಷದ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು.
2012ರಲ್ಲಿ ಕೆ.ಎಲ್.ಠಾಕೂರ್ ಗೆದ್ದಿದ್ದರು. ನಂತರ 2017ರಲ್ಲಿ ಸೋತಿದ್ದರು. ಈ ಬಾರಿಯ ಸ್ಪರ್ಧೆಗೆ ಬಿಜೆಪಿ ಲಖ್ವಿಂದರ್ ಸಿಂಗ್ ರಾಣ ಅವರಿಗೆ ಟಿಕೆಟ್ ನೀಡಿತ್ತು. 2 ಬಾರಿ ಶಾಸಕರಾಗಿದ್ದ ಕಾಂಗ್ರೆಸ್ ನಾಯಕ ರಾಣಾ ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಗೊಂಡಿದ್ದರು.
ಹಾಲಿ ಶಾಸಕರಾಗಿದ್ದ ಹೋಶಿಯರ್ ಸಿಂಗ್ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿತ್ತು. ರಮೇಶ್ ಧವಲಾ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಬಿಜೆಪಿ ನಾಯಕರಾಗಿ ಆಶಿಶ್ ಶರ್ಮಾ ಅವರು ಟಿಕೆಟ್ ಸಿಗದಿದ್ದಕ್ಕೆ ಬಂಡಾಯವೆದ್ದು ಹಮೀರಪುರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದಿದ್ದರು.
ಕಿನ್ನೌರ್, ಕುಲ್ಲು, ಬಂಜಾರ್, ಇಂದೋರಾ ಮತ್ತು ಧರ್ಮಶಾಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿಗೆ ಬಂಡಾಯ ಅಭ್ಯರ್ಥಿಗಳು ತೊಡಕಾದರು. ಇನ್ನು ಕಾಂಗ್ರೆಸ್‌ಗೆ ಪಚ್ಛಾದ್, ಚೌಪಾಲ್, ಆನೀ ಮತ್ತು ಸುಲಹ್ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಮುಳುವಾದರು.
ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳ ಒಟ್ಟು ಮತ ಗಳಿಕೆ ಶೇಕಡಾ 10.39 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.