ಶಿಮ್ಲಾ: ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಬಂಡಾಯ ಶಾಸಕರನ್ನು 'ಕರಿ ನಾಗರಹಾವುಗಳು' ಎಂದು ಕರೆದಿದ್ದರು. ಆದಾಗ್ಯೂ ಅವರೊಂದಿಗೆ (ಬಂಡಾಯ ಶಾಸಕರೊಂದಿಗೆ) ಮಾತುಕತೆ ನಡೆಸಲು ಸಚಿವ ವಿಕ್ರಮಾದಿತ್ಯ ಸಿಂಗ್ ಅವರಿಗೆ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.
ಶಿಮ್ಲಾದಲ್ಲಿ ಶುಕ್ರವಾರ ಮಾತನಾಡಿರುವ ಸುಖು, ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದ ಕೆಲವರು ಪಕ್ಷಕ್ಕೆ ಮರಳುವುದಾಗಿ ತಿಳಿಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಗುರುವಾರ ಹೇಳಿದ್ದರು. ಅದರಂತೆ ಅವರೊಂದಿಗೆ ಹಾಗೂ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲು ಸೂಚಿಸಿದ್ದೇನೆ ಎಂದು ಸುಖು ಹೇಳಿದ್ದಾರೆ.
ಬಂಡಾಯ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಪಕ್ಷ ಸಿದ್ಧವಿದೆ ಎಂದಿದ್ದಾರೆ.
ವಿಕ್ರಮಾದಿತ್ಯ ಅವರು ಖರ್ಗೆಯವರನ್ನು ಭೇಟಿಯಾದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಆದರೆ, ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು, ಹರಿಯಾಣದ ಪಂಚಕುಲಾದ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿರುವ ಅನರ್ಹ ಶಾಸಕರಾದ ಸುಧೀರ್ ಶರ್ಮಾ, ರವಿ ಠಾಕುರ್, ರಾಜಿಂದರ್ ರಾಣ, ಇಂದರ್ ದತ್, ಲಖನ್‌ಪಾಲ್, ಚೇತನ್ಯ ಶರ್ಮಾ ಮತ್ತು ದೇವಿಂದರ್ ಕುಮಾರ್ ಭುಟ್ಟೊ ಅವರನ್ನು ಗುರುವಾರ ರಾತ್ರಿ ಭೇಟಿಯಾಗಿದ್ದರು. ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತದ ಕುರಿತು ಚರ್ಚಿಸಲು ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ.
ಈ ನಡುವೆ ಅತೃಪ್ತ ಬಣವನ್ನು ಸಮಾಧಾನಪಡಿಸುವ ಪ್ರಯತ್ನ ಮುಂದುವರಿಸಿರುವ ಸಿಎಂ ಸುಖು, ರಾಂಪುರ ಶಾಸಕ ನಂದ ಲಾಲ್ ಅವರನ್ನು 7ನೇ ರಾಜ್ಯ ಹಣಕಾಸು ಅಯೋಗದ ಅಧ್ಯಕ್ಷರನ್ನಾಗಿ, ಕ್ಯಾಬಿನೆಟ್ ದರ್ಜೆ ಸ್ಥಾನಮಾನದೊಂದಿಗೆ ನೇಮಿಸಿದ್ದಾರೆ.
ನಂದ ಲಾಲ್ ಅವರು ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ರಾಜ್ಯಸಭೆ ಚುನಾವಣೆ ವೇಳೆ ಆರು ಶಾಸಕರು ಅಡ್ಡಮತದಾನ ಮಾಡಿದ್ದರು. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಸೋಲು ಕಂಡಿದ್ದರು. ಅಷ್ಟೇ ಅಲ್ಲದೆ, ಸರ್ಕಾರ ಪತನವಾಗುವ ಆತಂಕ ಎದುರಾಗಿತ್ತು.
ಹಣಕಾಸು ಮಸೂದೆಗೆ ಮತ ಹಾಕದೆ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದಲ್ಲಿ ಆ ಆರು ಶಾಸಕರನ್ನು ಗುರುವಾರ ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಎದುರಾಗಿದ್ದ ಬಿಕ್ಕಟ್ಟು ಸದ್ಯ ದೂರವಾಗಿದೆ.
ಈ ಬೆಳವಣಿಗೆಗಳ ನಡುವೆ ವಿಕ್ರಮಾದಿತ್ಯ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದ ವೀಕ್ಷಕರೊಂದಿಗಿನ ಸಭೆ ಬಳಿಕ ತಮ್ಮ ನಿಲುವು ಬದಲಿಸಿಕೊಂಡಿದ್ದರು.
ಸೋಲನ್ ಜಿಲ್ಲೆಯ ಧರ್ಮಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಂಡಾಯ ಶಾಸಕರನ್ನುದ್ದೇಶಿಸಿ ಮಾತನಾಡಿದ್ದ ಸುಖು, 'ಆರು ಕರಿ ನಾಗರಹಾವುಗಳು' ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ಹಣಕ್ಕಾಗಿ ಆತ್ಮಸಾಕ್ಷಿಯನ್ನೇ ಮಾರಾಟ ಮಾಡಿಕೊಂಡವರು, ತಮ್ಮ ಕ್ಷೇತ್ರದ ಜನರ ಸೇವೆ ಮಾಡಲು ಹೇಗೆ ಸಾಧ್ಯ? ಎಂದು ಗುರುವಾರ ಕಿಡಿಕಾರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.