ನವದೆಹಲಿ: ‘ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ರಾಜೀನಾಮೆ ನೀಡಬೇಕು ಹಾಗೂ ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ನೀಡಬೇಕು. ಇಲ್ಲವಾದಲ್ಲಿ ಆಗಸ್ಟ್ 22ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಕಾಂಗ್ರೆಸ್ ಮಂಗಳವಾರ ಘೋಷಿಸಿದೆ. ಹಿಂಡೆನ್‌ಬರ್ಗ್ ವರದಿ ಬಿಡುಗಡೆ ಬಳಿಕ ಎದ್ದಿರುವ ವಿವಾದ ಬೆನ್ನಲ್ಲೇ ಪಕ್ಷ ಈ ನಿರ್ಧಾರ ಪ್ರಕಟಿಸಿದೆ.
ಮುಂಬರುವ ವಿವಿಧ ವಿಧಾನಸಭೆ ಚುನಾವಣೆಗಳ ಸಂಬಂಧ ಪಕ್ಷವನ್ನು ಅಣಿಗೊಳಿಸುವುದು, ಪ್ರಚಾರದ ವೇಳೆ ರಾಷ್ಟ್ರದ ಹಿತವನ್ನು ಕುರಿತ ಯಾವೆಲ್ಲಾ ವಿಚಾರಗಳನ್ನು ಜನರ ಮುಂದಿಡಬೇಕು ಎನ್ನುವುದರ ಬಗ್ಗೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮೇಲಿನ ನಿರ್ಣಯವನ್ನು ಕೈಗೊಳ್ಳಲಾಗಿದೆ.
‘ಪ್ರತಿಭಟನೆ ನಡೆಸುವ ಕುರಿತು ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಸಭೆಯ ಬಳಿಕ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಪತ್ರಕರ್ತರಿಗೆ ತಿಳಿಸಿದರು. ಸಭೆಯಲ್ಲಿ ಎಲ್ಲ ಪ್ರಧಾನ ಕಾರ್ಯದರ್ಶಿಗಳು, ಎಲ್ಲ ರಾಜ್ಯ ಘಟಕದ ಅಧ್ಯಕ್ಷರು, ರಾಜ್ಯದ ಉಸ್ತುವಾರಿ ನಾಯಕರು ಭಾಗವಹಿಸಿದ್ದರು.
ಪ್ರಕರಣವೇನು?
ಅದಾನಿ ಸಮೂಹ ವಹಿವಾಟು ನಡೆಸುತ್ತಿದ್ದ ಬರ್ಮುಡಾ ಮತ್ತು ಮಾರಿಷಸ್‌ನ ‘ಶೆಲ್’ ಕಂಪನಿಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಪಾಲುದಾರಿಕೆ ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಕಂಪನಿ ಆಗಸ್ಟ್ 10ರಂದು ಆರೋಪ ಮಾಡಿತ್ತು.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಬುಚ್ ದಂಪತಿ, ‘ಹಿಂಡೆನ್‌ಬರ್ಗ್ ರಿಸರ್ಚ್ ಸೆಬಿಯ ವಿಶ್ವಾಸಾರ್ಹತೆ ಮೇಲೆ ದಾಳಿ ನಡೆಸಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.