ಚೆನ್ನೈ: ‘ತಮಿಳುನಾಡಿನಲ್ಲಿ ಪಾನಿಪೂರಿ ಮಾರುತ್ತಿರುವವರು ಹಿಂದಿ ಮಾತನಾಡುತ್ತಾರೆ. ಹಾಗಿರುವಾಗ ಉದ್ಯೋಗದ ಆಸೆಗಾಗಿ ಹಿಂದಿ ಕಲಿಯುವಂತೆ ಹೇಳುತ್ತಿರುವುದರ ಹಿಂದಿನ ತರ್ಕ ಏನು’ ಎಂದು ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಪ್ರಶ್ನಿಸಿದ್ದಾರೆ.
ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರ ಸಮ್ಮುಖದಲ್ಲಿ ಮಾತನಾಡಿದ ಪೊನ್ಮುಡಿ, ರಾಜ್ಯದ ದ್ವಿಭಾಷಾ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ರವಿ ಅವರು, ‘ಕೇಂದ್ರ ಸರ್ಕಾರವು ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುತ್ತಿದೆ’ ಎಂದು ಪ್ರತಿಪಾದಿಸುವ ಮೂಲಕ ಕೇಂದ್ರವು ಒಂದು ಭಾಷೆಯನ್ನು ಹೇರುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.
ಸಚಿವ ಪೊನ್ಮುಡಿ ಅವರು ತಮ್ಮ ಭಾಷಣದಲ್ಲಿ, ‘ತೃತಿಯ ಭಾಷೆ, ಅದರಲ್ಲೂ ಹಿಂದಿ ಬೇಕೇ ಎಂದು ಪ್ರಶ್ನಿಸಿದರು.
‘ತಮಿಳುನಾಡಿನಲ್ಲಿ ಇಂಗ್ಲಿಷ್ ಮತ್ತು ತಮಿಳು ಎಂಬ ಎರಡು ಭಾಷೆಗಳಿವೆ. ಇಂಗ್ಲಿಷ್ ಅಂತರರಾಷ್ಟ್ರೀಯ ಭಾಷೆಯಾಗಿದ್ದರೆ, ತಮಿಳು ಸ್ಥಳೀಯ ಭಾಷೆಯಾಗಿದೆ. ಹಿಂದಿ ಕಲಿಯುವುದರಿಂದ ನಮಗೆ ಉದ್ಯೋಗ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ, ನಮಗೆ ಉದ್ಯೋಗ ಸಿಕ್ಕಿದೆಯೇ? ನೀವು ಹೋಗಿ ನೋಡಿ ನಮ್ಮ ರಾಜ್ಯದ ಕೊಯಮತ್ತೂರಿನಲ್ಲಿ ಪಾನಿಪೂರಿ ಮಾರುವವರು ಯಾರು? ಅವರು ಹಿಂದಿ ಮಾತನಾಡುವವರು’ ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರನ್ನು ನೆನಪಿಸಿಕೊಂಡ ಅವರು, ‘ಅಣ್ಣಾ ಯಾವಾಗಲೂ ಒಂದು ಬೆಕ್ಕು ಮತ್ತು ಇಲಿಯ ಕಥೆಯನ್ನು ಹೇಳುತ್ತಿದ್ದರು. ಅದೇನೆಂದರೆ ಒಬ್ಬ ವ್ಯಕ್ತಿ ಯಾವಾಗಲೂ ಬೆಕ್ಕುಗಳು ಮತ್ತು ಇಲಿಗಳಿಗಾಗಿ ಎರಡು ಪ್ರತ್ಯೇಕ ಪ್ರವೇಶದ್ವಾರಗಳನ್ನು ಮಾಡುತ್ತಿದ್ದನು. ಬೆಕ್ಕುಗಳಿಗೆ ಮಾಡಿರುವ ಪ್ರವೇಶದ್ವಾರದ ಮೂಲಕ ಇಲಿ ಕೂಡಾ ಪ್ರವೇಶಿಸಬಹುದು ಎಂಬುದನ್ನು ಆ ವ್ಯಕ್ತಿಗೆ ತಿಳಿಸಲಾಯಿತು. ಅಂತೆಯೇ ನಾವು ಅಂತರರಾಷ್ಟ್ರೀಯ ಭಾಷೆಯಾಗಿ ಇಂಗ್ಲಿಷ್ ಅನ್ನು ಕಲಿಯುತ್ತಿರುವಾಗ ಬೇರೆ ಭಾಷೆಗಳ ಅವಶ್ಯಕತೆ ಏನಿದೆ’ ಎಂದು ಪ್ರಶ್ನಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಶಿಫಾರಸುಗಳನ್ನು ಉಲ್ಲೇಖಿಸಿ ರಾಜ್ಯದಲ್ಲಿ ತೃತೀಯ ಭಾಷೆಯ ಪರ ಮಾತನಾಡುತ್ತಿರುವ ರಾಜ್ಯಪಾಲರ ಹೇಳಿಕೆಗೆ ಸಚಿವ ಪೊನ್ಮುಡಿ ಅವರ ಹೇಳಿಕೆಯು ಪ್ರತಿಕ್ರಿಯೆಯಾಗಿದೆ ಎನ್ನಲಾಗುತ್ತಿದೆ.
ಜನವರಿಯಲ್ಲಿ ರಾಜ್ಯಪಾಲ ರವಿ ಅವರು, ‘ವಿದ್ಯಾರ್ಥಿಗಳಿಂದ ಇತರ ಭಾಷೆಗಳ ಜ್ಞಾನವನ್ನು ಕಸಿದು ಕೊಳ್ಳುವುದರಿಂದ ಎಲ್ಲರಿಗೂ ಅನ್ಯಾಯವಾಗುತ್ತಿದೆ’ ಎಂದು ನೀಡಿದ್ದ ಹೇಳಿಕೆಯು ಗದ್ದಲಕ್ಕೆ ಕಾರಣವಾಗಿತ್ತು.
ರಾಷ್ಟ್ರೀಯ ಶಿಕ್ಷಣ ನೀತಿ ಸೂಚಿಸಿರುವಂತೆ ತಮಿಳುನಾಡು ತ್ರಿಭಾಷಾ ನೀತಿಯನ್ನು ಜಾರಿಗೆ ತರುವುದರಿಂದ ತೃತೀಯ ಭಾಷೆಯ ರೂಪದಲ್ಲಿ ಹಿಂದಿಯನ್ನು ಹಿಂಬಾಗಿಲ ಮೂಲಕ ರಾಜ್ಯಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. 1967ರಿಂದ ರಾಜ್ಯವನ್ನು ಆಳುತ್ತಿರುವ ಡಿಎಂಕೆ ಮತ್ತು ಎಐಎಡಿಎಂಕೆ ಹಿಂದಿಯನ್ನು ಕಟುವಾಗಿ ವಿರೋಧಿಸುತ್ತಿವೆ ಮತ್ತು ರಾಜ್ಯವು ದ್ವಿಭಾಷಾ ನೀತಿಯನ್ನು ಅನುಸರಿಸುತ್ತದೆ ಎಂದು ಹಲವು ಬಾರಿ ಪುನರುಚ್ಚರಿಸಿದೆ.
1967ರಲ್ಲಿ ಅಂದಿನ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರು ತಮಿಳು ಮತ್ತು ಇಂಗ್ಲಿಷ್ ಎನ್ನುವ ದ್ವಿಭಾಷಾ ನೀತಿಯನ್ನು ಘೋಷಿಸಿದರು. ಅವರ ನಂತರ ಬಂದ ಸರ್ಕಾರಗಳು ಇದೇ ನೀತಿಯನ್ನು ಅನುಸರಿಸುತ್ತಿವೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂಗ್ಲಿಷ್ ಬದಲಿಗೆ ಹಿಂದಿಯನ್ನು ದೇಶದ ಸಂಪರ್ಕ ಭಾಷೆಯನ್ನಾಗಿ ಬದಲಾಯಿಸಬೇಕು ಎಂದು ನೀಡಿದ್ದ ಸಲಹೆಗೆ ಆಡಳಿತ ಪಕ್ಷ ಡಿಎಂಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ, ‘ಇದು ದೇಶದ ಏಕತೆಗೆ ಒಳ್ಳೆಯದಲ್ಲ’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.