ತಿರುವಲ್ಲೂರ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿದ್ದು, ನಮ್ಮ ಸರ್ಕಾರ ಅದನ್ನು ತಡೆಯುವ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.
ಹಿಂದಿ ವಿರೋಧಿ ಹೋರಾಟದಲ್ಲಿ ಮಡಿದವರ ನೆನಪಿಗಾಗಿ ಇಲ್ಲಿ ನಡೆದ ಭಾಷಾ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಹಿಂದಿ ಹೇರಿಕೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದೆ ಎಂದು ಅವರು ದೂರಿದರು.
‘ಭಾರತದ ಒಕ್ಕೂಟವನ್ನು ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರವು ಹಿಂದಿ ಹೇರಿಕೆ ಮಾಡುವುದನ್ನು ಅಭ್ಯಾಸವನ್ನಾಗಿ ಮಾಡಿಕೊಂಡಿದೆ. ಆಡಳಿತದಿಂದ ಹಿಡಿದು ಶಿಕ್ಷಣದವರೆಗೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಹಿಂದಿಯನ್ನು ಹೇರುವುದಕ್ಕೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಅವರು ಅಂದುಕೊಂಡಿದ್ದಾರೆ‘ ಎಂದು ಸ್ಟಾಲಿನ್ ಹೇಳಿದ್ದಾರೆ.
‘ಒಂದು ದೇಶ, ಒಂದು ಧರ್ಮ, ಒಂದು ಚುನಾವಣೆ, ಒಂದು ಪರೀಕ್ಷೆ, ಒಂದು ಆಹಾರ, ಒಂದು ಸಂಸ್ಕೃತಿ ಹೀಗೆ ಒಂದು ಭಾಷೆಯಿಂದ ಇತರ ರಾಷ್ಟ್ರೀಯ ಜನಾಂಗಗಳ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕೇಂದ್ರ ಸರ್ಕಾರ ಲಜ್ಜೆಗೆಟ್ಟು ಹಿಂದಿ ಹೇರಿಕೆ ಮಾಡುತ್ತಿದ್ದು, ಹಿಂದಿ ದಿನಾಚ ಆಚರಣೆ ಮಾಡುತ್ತಿದೆ. ಆದರೆ ಇತರೆ ಭಾಷೆಗಳಿಗೆ ಈ ಮಾನ್ಯತೆ ನೀಡುತ್ತಿಲ್ಲ. ಹಿಂದಿ ಹೇರಿಕೆ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ‘ ಎಂದು ಅವರು ಹೇಳಿದ್ದಾರೆ.
2017–20ರ ಅವಧಿಯಲ್ಲಿ ಸಂಸ್ಕೃತದ ಪ್ರಚಾರಕ್ಕೆ ಕೇಂದ್ರ ಸರ್ಕಾರ ₹ 643 ಕೋಟಿ ಖರ್ಚು ಮಾಡಿದೆ. ಆದರೆ ತಮಿಳು ಭಾಷೆಗೆ ₹ 23 ಕೋಟಿಗಿಂತ ಕಡಿಮೆ ಹಣ ವ್ಯಯಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.