ಸೂರತ್: ಹಿಂದಿ ಭಾಷೆಯು ಪ್ರತಿಸ್ಪರ್ಧಿಯಲ್ಲ, ದೇಶದ ಎಲ್ಲ ಭಾಷೆಗಳ ಮಿತ್ರ ಭಾಷೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬುದು ತಪ್ಪು ಮಾಹಿತಿ ಎಂದು ಅವರು ಹೇಳಿದ್ದಾರೆ.
ಹಿಂದಿ ಜೊತೆ ಜೊತೆಗೆ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸುವ ಅಗತ್ಯತೆಯನ್ನು ಅವರು ಸೂರತ್‌ನ ಅಖಿಲ ಭಾರತ ಅಧಿಕೃತ ಭಾಷೆಗಳ ಸಮ್ಮೇಳನದಲ್ಲಿ ಒತ್ತಿ ಹೇಳಿದರು.
‘ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಕೆಲವರು ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳು ಪರಸ್ಪರ ಪ್ರತಿಸ್ಪರ್ಧಿ ಎಂಬ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಹಿಂದಿ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಲ್ಲ. ದೇಶದ ಎಲ್ಲ ಭಾಷೆಗಳ ಮಿತ್ರ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಿದೆ’ ಎಂದು ಅವರು ಹೇಳಿದರು.
‘ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಎಲ್ಲಿಯವರೆಗೆ ನಾವು ಭಾಷೆಗಳ ಸಹಬಾಳ್ವೆಯನ್ನು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ, ನಮ್ಮ ಭಾಷೆಯಲ್ಲಿ ದೇಶವನ್ನು ನಡೆಸುವ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ. ಅದು ನಮ್ಮ ಗುರಿಯಾಗಬೇಕು ಎಂದು ನಾನು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇನೆ. ಎಲ್ಲಾ ಭಾಷೆಗಳನ್ನು ಮತ್ತು ಮಾತೃಭಾಷೆಗಳನ್ನು ಸಮೃದ್ಧವಾಗಿ ಇರಿಸಬೇಕು. ಈ ಎಲ್ಲಾ ಭಾಷೆಗಳ ಏಳಿಗೆಯಿಂದ ಮಾತ್ರ ಹಿಂದಿ ಏಳಿಗೆಯಾಗಲಿದೆ’ಎಂದು ಶಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.