ADVERTISEMENT

ದೇಶದಲ್ಲಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಬಳಸಬೇಕು: ಅಮಿತ್ ಶಾ

ಪಿಟಿಐ
Published 8 ಏಪ್ರಿಲ್ 2022, 9:55 IST
Last Updated 8 ಏಪ್ರಿಲ್ 2022, 9:55 IST
ಅಮಿತ್‌ ಶಾ
ಅಮಿತ್‌ ಶಾ    

ನವದೆಹಲಿ: ವಿವಿಧ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸುವಾಗ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನು ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ನಡೆದ ‘ಅಧಿಕೃತ ಭಾಷಾ ಸಂಸದೀಯ ಸಮಿತಿಯ’ 37ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಿತ್‌ ಶಾ, ‘ಸರ್ಕಾರ ಬಳಸುವ ಮಾಧ್ಯಮವೇ ಅಧಿಕೃತ ಭಾಷೆ’ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಇದು ನಿಜಕ್ಕೂ ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ’ ಎಂದು ಕೇಂದ್ರ ಹೊರಡಿಸಿದ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸದ್ಯ ಸಚಿವ ಸಂಪುಟದ ಶೇ 70ರಷ್ಟು ಕಾರ್ಯಸೂಚಿ ಹಿಂದಿಯಲ್ಲೇ ಸಿದ್ಧವಾಗುತ್ತಿದೆ. ‘ಅಧಿಕೃತ ಭಾಷೆ’ ಹಿಂದಿಯನ್ನು ದೇಶದ ಏಕತೆಯ ಪ್ರಮುಖ ಭಾಗವನ್ನಾಗಿ ಮಾಡುವ ಸಮಯ ಇದೀಗ ಒದಗಿಬಂದಿದೆ. ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಬಳಸಬೇಕೆ ಹೊರತು ಸ್ಥಳೀಯ ಭಾಷೆಗಳಿಗೆ ಬದಲಾಗಿ ಅಲ್ಲ. ವಿವಿಧ ಭಾಷೆಗಳನ್ನು ಮಾತನಾಡುವ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸುವಾಗ ‘ಭಾರತದ ಭಾಷೆ’ಯನ್ನು ಬಳಸಬೇಕು ಎಂದು ಗೃಹ ಸಚಿವರು ಆಗ್ರಹಿಸಿದರು.

ADVERTISEMENT

‘ಬೇರೆ ಸ್ಥಳೀಯ ಭಾಷೆಗಳ ಪದಗಳನ್ನು ಸ್ವೀಕರಿಸಿ ಹಿಂದಿಯೊಂದಿಗೆ ಜೋಡಿಸದ ಹೊರತು, ಹಿಂದಿಗೆ ಪ್ರಚಾರ ಸಿಗಲಾರದು’ ಎಂದು ಅವರು ಇದೇ ವೇಳೆ ಹೇಳಿದರು.

9 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯ ಪ್ರಾಥಮಿಕ ಜ್ಞಾನವನ್ನು ಒದಗಿಸುವ ಅಗತ್ಯವನ್ನು ಅಮಿತ್‌ ಶಾ ಸಭೆಯಲ್ಲಿ ಒತ್ತಿ ಹೇಳಿದರು.

ಹಿಂದಿ ಬೋಧನಾ ಪರೀಕ್ಷೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಹಿಂದಿ ನಿಘಂಟನ್ನು ಪರಿಷ್ಕರಿಸುವ ಮೂಲಕ ಮರುಪ್ರಕಟಿಸಲು ಗೃಹ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಸಮಿತಿಯ ವರದಿಯ 11ನೇ ಸಂಪುಟವನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಶಾ ಸಭೆಯಲ್ಲಿ ಅನುಮೋದನೆ ನೀಡಿದರು.

ಈಶಾನ್ಯದ 8 ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಶಾನ್ಯದ ಒಂಬತ್ತು ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಾಗರಿಗೆ ಪರಿವರ್ತಿಸಿವೆ. ಇದಲ್ಲದೆ, ಈಶಾನ್ಯದ ಎಂಟು ರಾಜ್ಯಗಳು ಶಾಲೆಗಳಲ್ಲಿ 10 ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ ಎಂದು ಅಮಿತ್‌ ಶಾ ಇದೇ ವೇಳೆ ಸಭೆಗೆ ತಿಳಿಸಿದರು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.