ಮಥುರಾ : ಹಣ್ಣು, ಹೂವು, ಪಂಚಮೇವ, ಏಲಕ್ಕಿ, ಸಕ್ಕರೆ ಬಳಸಿ ತಯಾರಿಸಿದ ‘ಪ್ರಾಚೀನ ಶೈಲಿ ಪ್ರಸಾದ’ವನ್ನೇ ಸ್ಥಳೀಯ ದೇವಸ್ಥಾನಗಳಲ್ಲಿ ಭಕ್ತರಿಗೆ ನೀಡಲು ಸ್ಥಳೀಯ ಧಾರ್ಮಿಕ ಸಂಘಟನೆ ನಿರ್ಧರಿಸಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ಸಿಹಿ ತಿನಿಸುಗಳನ್ನು ಪ್ರಸಾದವಾಗಿ ವಿತರಿಸುವ ಕ್ರಮವನ್ನು ಕೈಬಿಟ್ಟಿದೆ. ಆಂಧ್ರದ ತಿರುಪತಿ ದೇವಸ್ಥಾನದ ಲಡ್ಡು ಕಲಬೆರಕೆ ವಿವಾದದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ವೃಂದಾವನಲ್ಲಿ ಬುಧವಾರ ನಡೆದ ಸಭೆಯಲ್ಲಿ ಧರ್ಮ ರಕ್ಷಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಸೌರಭ್ ಗೌರ್ ಅವರು, ‘ದೇಶವ್ಯಾಪಿ ಎಲ್ಲ ದೇವಸ್ಥಾನಗಳಲ್ಲಿ ವಿತರಿಸುವ ‘ಪ್ರಸಾದ’ದ ಸ್ವರೂಪದಲ್ಲಿ ಗಮನಾರ್ಹ ಸುಧಾರಣೆ ತರುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
ಪ್ರಾಚೀನ ಶೈಲಿಯ ಶುದ್ಧ, ಸಾತ್ವಿಕ ಪ್ರಸಾದವನ್ನೇ ವಿತರಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದರು.
ವೃಂದಾವನದ ದೇವಸ್ಥಾನಗಳ ಮೇಲೆ ಪ್ರಭಾವ ಹೊಂದಿರುವ ಧರ್ಮರಕ್ಷಕ ಸಂಘವು, ‘ದೇಶದ ವಿವಿಧೆಡೆಯೂ ಎಲ್ಲ ಧಾರ್ಮಿಕ ಸಂಘಟನಗಳು ಇಂತಹದೇ ನಿಲುವು ಕೈಗೊಳ್ಳವುದಕ್ಕೆ ಉತ್ತೇಜನ ನೀಡಲಿದೆ’ ಎಂದರು.
ಸಂಘದ ಉಪಾಧ್ಯಕ್ಷ ಮಹಾಂತ ದೇವಾನಂದ ಪರಮಹಂಸ, ‘ದೇವಸ್ಥಾನಗಳಲ್ಲಿ ಪ್ರಾಚೀನ ಶೈಲಿ ಪ್ರಸಾದದ ಜೊತೆಗೆ ಆಯಾ ಋತುವಿನಲ್ಲಿ ಲಭ್ಯವಿರುವ ಹಣ್ಣುಗಳನ್ನು ವಿತರಿಸಬಹುದು’ ಎಂದು ಸಲಹೆ ಮಾಡಿದರು.
ದೇವಸ್ಥಾನದಲ್ಲಿ ‘ಸಾತ್ವಿಕ ಭೋಗ’ ಜಾರಿಗೊಳಿಸುವ ಸಂಬಂಧ ಸಂಘಟನೆಯು ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದೆ ಎಂದು ಸಂಘದ ರಾಷ್ಟ್ರೀಯ ಸಂಚಾಲಕ ಆಚಾರ್ಯ ಬದರೀಶ ಮಹಾರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.