ಶ್ರೀನಗರ: ಹತ್ಯೆ ಭೀತಿಯಿಂದ ನೂರಾರು ಹಿಂದೂ ಕುಟುಂಬಗಳು ಕಾಶ್ಮೀರ ತೊರೆದಿವೆ ಎಂದು ಸಮುದಾಯದ ಮುಖಂಡರೊಬ್ಬರು ಬುಧವಾರ ತಿಳಿಸಿದ್ದಾರೆ.
ಕುಲ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ (ಹಿಂದೂ) ಶಿಕ್ಷಕಿ ರಜನಿ ಬಲ್ಲಾ (36) ಅವರನ್ನು ಉಗ್ರರು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಹಿಂದೂ ಕುಟುಂಬಗಳು ಕಾಶ್ಮೀರ ತೊರೆಯಲಾರಂಭಿಸಿವೆ.
ಕಾಶ್ಮೀರದ ಬಾರಮುಲ್ಲಾ ಪ್ರದೇಶದಲ್ಲಿ ವಾಸಿಸುತ್ತಿರುವ 300 ಹಿಂದೂ ಕುಟುಂಬಗಳ ಪೈಕಿ ಅರ್ಧಕ್ಕೂ ಹೆಚ್ಚು ಮಂಗಳವಾರದ ಬಳಿಕ ಆ ಪ್ರದೇಶ ತೊರೆದಿವೆ ಎಂದು ಅಲ್ಲಿನ ‘ಹಿಂದೂ ಕಾಶ್ಮೀರಿ ಪಂಡಿತ್ ಕಾಲೊನಿ’ಯ ಅಧ್ಯಕ್ಷ ಅವತಾರ್ ಕೃಷ್ಣ ಭಟ್ ತಿಳಿಸಿದ್ದಾರೆ.
‘ನಿನ್ನೆ ನಡೆದ ಹತ್ಯೆಯಿಂದ ಅವರು ಭೀತರಾಗಿದ್ದಾರೆ. ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ನಾಳೆ ನಾವೂ ಕೂಡ ಇಲ್ಲಿಂದ ತೆರಳಲಿದ್ದೇವೆ. ಕಾಶ್ಮೀರದ ಹೊರಭಾಗದಲ್ಲಿ ನಮಗೆ ಪುನವರ್ಸತಿ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು’ ಎಂದು ಅವರು ಹೇಳಿದ್ದಾರೆ.
ಹಿಂದೂಗಳು ಇರುವ ಪ್ರದೇಶವನ್ನು ಸದ್ಯ ಪೊಲೀಸರು ಸುತ್ತುವರಿದಿದ್ದಾರೆ. ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರು ಇರುವ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಹಿಂದೂ ಕುಟುಂಬಗಳು ಕಾಶ್ಮೀರ ತೊರೆಯುತ್ತಿರುವ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಸ್ಥಳೀಯಾಡಳಿತ ನಿರಾಕರಿಸಿದೆ.
ಕಾಶ್ಮೀರಿ ಪಂಡಿತರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಳೆದ ತಿಂಗಳು ಭರವಸೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.