ನವ ದೆಹಲಿ: ಧ್ರುವ ಪ್ರದೇಶ ಹೊರತುಪಡಿಸಿ ಅತಿ ಹೆಚ್ಚು ಹಿಮಾಚ್ಛಾದಿತ ಪ್ರದೇಶವಾಗಿರುವ ಹಿಂದುಕುಶ್ ಹಿಮಾಲಯ ಪರ್ವತ ಶ್ರೇಣಿಯಲ್ಲಿ 2100ರ ಹೊತ್ತಿಗೆ ಶೇ 80ರಷ್ಟು ನೀರ್ಗಲ್ಲುಗಳು ಕರಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ.
ನೇಪಾಳದ ಕಟ್ಮಂಡು ಮೂಲದ ಪರ್ವತ ಶ್ರೇಣಿಗಳ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರ ನಡೆಸಿದ ಅಧ್ಯಯನದ ಪ್ರಕಾರ, 2000ದಿಂದ 2009ರವರೆಗಿನ ಅವಧಿಯನ್ನು ಹೋಲಿಸಿದಲ್ಲಿ 2010ರಿಂದ 2019ರವರೆಗೆ ನೀರ್ಗಲ್ಲುಗಳು ಕರಗುವ ಪ್ರಮಾಣ ಶೇ 65ರಷ್ಟು ವೇಗವಾಗಿದೆ.
ಹಿಂದುಕುಶ್ ಹಿಮಾಲಯ ಪರ್ವತಶ್ರೇಣಿಯು ಸುಮಾರು 12 ನದಿಗಳ ಜಲಮೂಲವಾಗಿದೆ. ಸುಮಾರು 24 ಕೋಟಿ ಜನರು ಇದನ್ನು ಅವಲಂಭಿಸಿದ್ದಾರೆ. ಆದರೆ ಪ್ರಕೃತಿಯಲ್ಲಿ ಮಾನವನ ಅನಗತ್ಯ ಹಸ್ತಕ್ಷೇಪದಿಂದಾಗಿ ಪರ್ವತದಲ್ಲಿನ ನೀರ್ಗಲ್ಲುಗಳು ವೇಗವಾಗಿ ಕರಗುತ್ತಿವೆ. ಇದರ ಪರಿಣಾಮ ಪ್ರವಾಹಗಳು ಉಂಟಾಗಲಿವೆ. ಅದು ನೇರವಾಗಿ ಜನರ ಮೇಲೆ ಪರಿಣಾಮ ಬೀರಲಿದೆ. ನೀರಾವರಿ ವ್ಯವಸ್ಥೆ ಹಾಗೂ ಕೃಷಿ ಮೇಲೆ ಪರಿಣಾಮ ಬೀರಲಿದೆ.
ಹಿಮಾಲಯ ಪರ್ವತಶ್ರೇಣಿಯಲ್ಲಿನ ನೀರ್ಗಲ್ಲುಗಳ ಕರಗುವಿಕೆಯಿಂದ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಭಾರತ, ಮ್ಯಾನ್ಮಾರ್ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಹೆಚ್ಚು ಸಮಸ್ಯೆ ಎದುರಿಸಲಿವೆ. ಹೀಗಾಗಿ ಪರ್ವತಶ್ರೇಣಿ ಉಳಿಸಲು ಈ ರಾಷ್ಟ್ರಗಳು ಇನ್ನಷ್ಟು ಪ್ರಯತ್ನ ನಡೆಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಿಂದುಕುಶ್ 4.2 ದಶಲಕ್ಷ ಚದರ ಕಿಲೋಮೀಟರ್‌ನಷ್ಟು ವಿಸ್ತೀರ್ಣ ಹೊಂದಿದೆ. ಧ್ರುವ ಪ್ರದೇಶ ಹೊರತುಪಡಿಸಿ ಮೌಂಟ್ ಎವರೆಸ್ಟ್ ಹಾಗೂ ಕೆ2 ಪರ್ವತ ಶ್ರೇಣಿಗಳು ಅತಿ ಹೆಚ್ಚು ಹಿಮಚ್ಛಾದಿತ ಪ್ರದೇಶಗಳನ್ನು ಹೊಂದಿವೆ. ಪಶ್ಚಿಮದಲ್ಲಿ ಆಫ್ಘಾನಿಸ್ತಾನದಿಂದ ಆರಂಭಗೊಂಡು ಪೂರ್ವದಲ್ಲಿರುವ ಮ್ಯಾನ್ಮಾರ್‌ವರೆಗೆ 3500ಕಿ.ಮೀ. ಉದ್ದದ ಶ್ರೇಣಿ ಇದಾಗಿದೆ. ಜಗತ್ತಿನ ಅಪರೂಪದ ಜೀವವೈವಿಧ್ಯತೆ ಇಲ್ಲಿದೆ.
ಭೂಮಿಯ ಮೇಲ್ಮೈ ತಾಪಮಾನ 1.15 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಕೈಗಾರಿಕಾ ಕ್ರಾಂತಿಯ ನಂತರ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಳವಾಗಿದೆ. ಈ ಶತಮಾನದ ಅಂತ್ಯದ ಹೊತ್ತಿಗೆ 3 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಮಾಲಿನ್ಯ ನಿಯಂತ್ರಣವೊಂದೇ ಇದನ್ನು ತಡೆಯಲು ಇರುವ ಏಕೈಕ ಮಾರ್ಗ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.