ADVERTISEMENT

ಹುತಾತ್ಮರ ದಿನ: ನಾಥೂರಾಮ್‌ ಗೋಡ್ಸೆಗೆ ಶ್ರದ್ಧಾಂಜಲಿ ಸಲ್ಲಿಸಿದ ಹಿಂದೂ ಮಹಾಸಭಾ

ಮಹಾತ್ಮ ಗಾಂಧಿ ಅವರನ್ನು ಟೀಕಿಸಿದ ಕಾಳಿಚರಣ್‌ಗೆ ಭಾರತ ರತ್ನ ಪ್ರದಾನ ಮಾಡಿದ ಸಂಘ

ಪಿಟಿಐ
Published 30 ಜನವರಿ 2022, 19:31 IST
Last Updated 30 ಜನವರಿ 2022, 19:31 IST
ಮಹಾತ್ಮ ಗಾಂಧಿ 
ಮಹಾತ್ಮ ಗಾಂಧಿ    

ಭೋಪಾಲ್/ಗ್ವಾಲಿಯರ್‌: ದೇಶದಲ್ಲಿ ಎಲ್ಲೆಡೆ ಭಾನುವಾರ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯನ್ನು ಆಚರಿಸಿ ಬಾಪುವನ್ನು ಸ್ಮರಿಸಿಕೊಂಡಿತು. ಆದರೆ ಹಿಂದೂ ಮಹಾಸಭಾ ಸಂಘವು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ‘ಗೋಡ್ಸೆ–ಆಪ್ಟೆ ಸ್ಮೃತಿ ದಿನ’ ಆಚರಿಸುವ ಮೂಲಕ ಮಹಾತ್ಮನ ಹತ್ಯೆಕೋರರಾದ ನಾಥೂರಾಮ್‌ ಗೋಡ್ಸೆ ಮತ್ತು ಸಹ ಆರೋಪಿ ನಾರಾಯಣ ಆಪ್ಟೆಗೆ ಶ್ರದ್ಧಾಂಜಲಿ ಸಲ್ಲಿಸಿದೆ.

ಛತ್ತೀಸ್‌ಗಡದ ರಾಜಧಾನಿ ರಾಯ್‌ಪುರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಕಳೆದ ಡಿಸೆಂಬರ್‌ನಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಧಾರ್ಮಿಕ ಮುಖಂಡ ಕಾಳಿಚರಣ್‌ ಮಹಾರಾಜ್‌ ಮತ್ತು ನಾಲ್ವರು ನಾಯಕರಿಗೆ ಬಲಪಂಥೀಯ ಸಂಘಟನೆಯು ‘ಗೋಡ್ಸೆ–ಆಪ್ಟೆ ಭಾರತ ರತ್ನ’ ಪ್ರಶಸ್ತಿಯನ್ನು ಇದೇ ವೇಳೆ ಪ್ರದಾನ ಮಾಡಿತು.

‘ಭಾರತವನ್ನು ಪಾಕಿಸ್ತಾನದ ಜೊತೆ ಏಕೀಕರಣ ಮಾಡಿ ಅಖಂಡ ಭಾರತವನ್ನಾಗಿ ಮಾಡುವ ಸಂಕಲ್ಪದೊಂದಿಗೆ ನಾವು ಭಾರತ ಮಾತೆಗೆ ಆರತಿ ಬೆಳಗಿದ್ದೇವೆ. 1948ರ ಜನವರಿ 30 ರಂದು ಗೋಡ್ಸೆ ಮತ್ತು ಆಪ್ಟೆ ಅವರನ್ನು ಬಂಧಿಸಿದ್ದಕ್ಕಾಗಿ ವಿರೋಧದ ರೂಪದಲ್ಲಿ ಜನವರಿ 30 ಅನ್ನು ‘ಗೋಡ್ಸೆ–ಆಪ್ಟೆ ಸ್ಮೃತಿ ದಿನ’ ಎಂದು ಆಚರಿಸುತ್ತಿದ್ದೇವೆ’ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್‌ ಭಾರಧ್ವಾಜ್‌ ಗ್ವಾಲಿಯರ್‌ನಿಂದ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.