ADVERTISEMENT

ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನೆರೆವೇರಿಸಿದ ಮುಸ್ಲಿಂ ಕುಟುಂಬ

ಪಿಟಿಐ
Published 28 ಜೂನ್ 2019, 1:54 IST
Last Updated 28 ಜೂನ್ 2019, 1:54 IST
   

ಭದೋಹಿ(ಯುಪಿ): ಉತ್ತರ ಪ್ರದೇಶದ ಹರಿರಾಂಪುರ ಹಳ್ಳಿಯಲ್ಲಿ ಮುಸ್ಲಿಂ ಕುಟುಂಬ, ಮೃತ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ಹಾಗೂ 13ನೇ ದಿನದ ಅಪರಕರ್ಮ ನೆರವೇರಿಸಿದೆ. ಈ ಮೂಲಕಹಿಂದೂ–ಮುಸ್ಲಿಂ ಬಾಂಧವ್ಯಕ್ಕೆ ಕುಟುಂಬ ಉದಾಹರಣೆಯಾಗಿ ನಿಂತಿದೆ.

ಇರ್ಫಾನ್‌ ಮೊಹಮ್ಮದ್ ಖಾನ್‌ ಹಾಗೂ ಫರೀದ್ ಖಾನ್‌ ಮಾಲೀಕತ್ವದ ಸಂಸ್ಥೆಯಲ್ಲಿ ಮೊರಾರಿ ಲಾಲ್‌ ಶ್ರೀವಾಸ್ತವ್‌(65) ಕಾರ್ಯನಿರ್ವಹಿಸುತ್ತಿದ್ದರು. ಜೂನ್‌ 13ರಂದು ವಿಷಜಂತು ಕಡಿದ ಪರಿಣಾಮವಾಗಿ ಶ್ರೀವಾಸ್ತವ್‌ ಮೃತಪಟ್ಟಿದ್ದರು. ಮೃತರಿಗೆ ಹತ್ತಿರದ ಕುಟುಂಬಸ್ಥರು ಯಾರೂ ಇರದ ಕಾರಣ ಮೃತದೇಹವನ್ನು ಖಾನ್‌ ಕುಟುಂಬಕ್ಕೆ ಪೊಲೀಸರುಹಸ್ತಾಂತರಿಸಿದ್ದರು. ಖಾನ್ ಕುಟುಂಬ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿತ್ತು.

ಈ ಕುರಿತು ಮಾತನಾಡಿದ ಇರ್ಫಾನ್‌ ಖಾನ್‌, ‘ಶ್ರೀವಾಸ್ತವ್‌ ನಮ್ಮ ಜತೆ ಕಳೆದ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ನಮ್ಮ ಕುಟುಂಬದ ಸದಸ್ಯರಾಗಿಯೇ ಅವರು ಜತೆಗಿದ್ದರು. ಅಪರಕರ್ಮಕ್ಕೆ ನೆರೆಹೊರೆಯವರನ್ನು ಕರೆಯಲು ತೆರಳಿದ ಸಂದರ್ಭದಲ್ಲಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದರು. ಅಂದಾಜು 1 ಸಾವಿರ ಹಿಂದೂ, ಮುಸ್ಲಿಂ ಜನರು ಇದರಲ್ಲಿ ಭಾಗವಹಿಸಿದ್ದರು’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.