ಲಖನೌ: ಬಹು ನಿರೀಕ್ಷಿತ ಅಯೋಧ್ಯೆ ತೀರ್ಪಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಧಾರ್ಮಿಕ ಮುಖಂಡರು ಮತ್ತು ವಿವಿಧ ಸಂಘಸಂಸ್ಥೆಗಳ ನಾಯಕರು ‘ಯಾವುದೇ ರೀತಿಯ ತೀರ್ಪು ಬರಲಿ. ಸಮಾಜದಲ್ಲಿ ಶಾಂತಿ ಉಳಿಯುವಂತೆ ನಮ್ಮ ವರ್ತನೆ ಇರಲಿ’ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.
ಇದೇ 17ಕ್ಕೆ ನಿವೃತ್ತರಾಗಲಿರುವಸುಪ್ರೀಂಕೋರ್ಟ್‌ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಅದಕ್ಕೂ ಮೊದಲೇ ಅಯೋಧ್ಯೆ ಪ್ರಕರಣದ ತೀರ್ಪು ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಮತ್ತು ಅದರ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಸಂವಿಧಾನ, ನ್ಯಾಯಾಂಗದ ಮೇಲೆ ವಿಶ್ವಾಸ
‘ಅಯೋಧ್ಯೆ ಪ್ರಕರಣದ ತೀರ್ಪು ಕೆಲ ದಿನಗಳಲ್ಲಿ ಬರಲಿದೆ. ತೀರ್ಪು ಹೇಗೆ ಬಂದರೂ ನಾವು (ಮುಸ್ಲಿಂ ಸಮುದಾಯದವರು)ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ನಂಬಿಕೆ ಕಳೆದುಕೊಳ್ಳಬಾರದು.ದೇಶದ ಕೋಮು ಸಾಮರಸ್ಯ ಕಾಪಾಡಬೇಕು’ ಎಂದುಲಖನೌ ಮಸೀದಿಯ ಶಾಹಿ ಇಮಾಮ್ ಮತ್ತುಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಬಿ) ಹಿರಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಕಿವಿಮಾತು ಹೇಳಿದ್ದಾರೆ.
‘ಈ ಸಂಬಂಧ ಎಲ್ಲ ಮಸೀದಿಗಳಲ್ಲಿಯೂ ಇಮಾಮ್‌ಗಳು ಸಮುದಾಯದ ಜನರಿಗೆ ತಿಳಿ ಹೇಳಬೇಕು. ಕೋಮು ಸೌಹಾರ್ದ ಮತ್ತು ಗಂಗಾ–ಜಮುನಿ ಪರಂಪರೆಗೆ (ತೆಹಜೀಬ್) ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಇದು ದೇಶದ ಅತಿ ದೊಡ್ಡ ಮತ್ತು ಅತಿ ಸೂಕ್ಷ್ಮ ಪ್ರಕರಣ. ಇಡೀ ದೇಶ ಮತ್ತು ಜಾಗತಿಕ ಸಮುದಾಯವೇ ಇದನ್ನು ಗಮನಿಸುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕರು ನ್ಯಾಯಾಲಯದ ತೀರ್ಪುನ್ನು ಗೌರವಿಸಿ, ಶಾಂತಿ ಕಾಪಾಡಬೇಕು’ ಎಂದು ಅವರು ಕೋರಿದ್ದಾರೆ.
‘ತೀರ್ಪು ಬಂದ ಬಳಿಕ ಜನರು ಯಾವುದೇ ರೀತಿಯ ಸಂಭ್ರಮ ಆಚರಿಸಲು ಮುಂದಾಗಬಾರದು. ಘೋಷಣೆಗಳನ್ನು ಕೂಗಬಾರದು ಹಾಗೂ ಪ್ರತಿಭಟನೆ ಮಾಡಬಾರದು. ಯಾರ ಧಾರ್ಮಿಕ ಭಾವನೆಗಳನ್ನು ನಾವು ಕೆದಕಬಾರದು’ಎಂದು ಅವರು ಮನವಿ ಮಾಡಿದ್ದಾರೆ.
ಮುಕ್ತ ಮನಸ್ಸಿನಿಂದ ತೀರ್ಪು ಒಪ್ಪಿಕೊಳ್ಳೋಣ: ಆರ್‌ಎಸ್‌ಎಸ್
‘ತೀರ್ಪು ಹೇಗಿದ್ದರೂ ಸರಿ, ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳೋಣ’ ಎಂದು ಬಿಜೆಪಿಯ ಮಾತೃ ಸಂಘಟನೆ ಅಥವಾಸೈದ್ಧಾಂತಿಕ ಮಾರ್ಗದರ್ಶಕ ಎನಿಸಿಕೊಳ್ಳುವಆರ್‌ಎಸ್‌ಎಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಮಾಡಿರುವ ಟ್ವೀಟ್‌ನಲ್ಲಿ ತಿಳಿಸಿದೆ.
‘ಸುಪ್ರೀಂಕೋರ್ಟ್ ತೀರ್ಪನ್ನು ನಾವೆಲ್ಲರೂ ಗೌರವಿಸಬೇಕು. ತೀರ್ಪು ಪ್ರಕಟವಾದ ನಂತರ ದೇಶದ ಸೌಹಾರ್ದ ವಾತಾವರಣ ಕದಡದಂತೆ ಕಾಪಾಡುವುದು ಎಲ್ಲರ ಜವಾಬ್ದಾರಿ’ ಎಂದು ಆರ್‌ಎಸ್‌ಎಸ್ ಹೇಳಿದೆ.
ಅಯೋಧ್ಯೆಯಲ್ಲಿ ಮುಂದೊಂದು ದಿನ ಕಟ್ಟಬೇಕು ಎಂದಿರುವ ರಾಮಮಂದಿರಕ್ಕಾಗಿ ಕುಸುರಿ ಕೆಲಸದಕಂಬಗಳನ್ನು ಸಂಗ್ರಹಿಸಿರುವ ವಿಶ್ವ ಹಿಂದೂ ಪರಿಷತ್ ಸಹ ಶಾಂತಿಗಾಗಿ ಕರೆ ನೀಡಿದೆ. ಸುಪ್ರೀಂಕೋರ್ಟ್ ತೀರ್ಪಿನ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳ ಎಲ್ಲ ಕಾರ್ಯಕ್ರಮಗಳನ್ನು ಕೈಬಿಟ್ಟಿದೆ.
ಬಂದೋಬಸ್ತ್ ಹೆಚ್ಚಳ
ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಪಿ.ವಿ.ರಾಮಶಾಸ್ತ್ರಿ ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು.
ಅಯೋಧ್ಯೆ ನಗರಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿರುವ ಎರಡೂ ಧರ್ಮಗಳ ಜನರೊಂದಿಗೆ ಪೊಲೀಸರು ಈಗಾಗಲೇ ಸಭೆಗಳನ್ನು ನಡೆಸುತ್ತಿದ್ದರೆ. ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದೇವೆ. ಅಯೋಧ್ಯೆಯಲ್ಲಿ ಬಂದೋಬಸ್ತ್‌ಗಾಗಿ ಭಾರಿ ಪ್ರಮಾಣದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನಷ್ಟು ತುಕಡಿಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.