ADVERTISEMENT

ಉತ್ತರಕಾಶಿ|ಮಸೀದಿ ಧ್ವಂಸಕ್ಕೆ ಆಗ್ರಹಿಸಿ ಹಿಂದೂ ಸಂಘಟನೆ ಪ್ರತಿಭಟನೆ: ಹಲವರಿಗೆ ಗಾಯ

ಪಿಟಿಐ
Published 25 ಅಕ್ಟೋಬರ್ 2024, 2:37 IST
Last Updated 25 ಅಕ್ಟೋಬರ್ 2024, 2:37 IST
<div class="paragraphs"><p>ಮಸೀದಿ ತೆರವಿಗೆ ಆಗ್ರಹಿಸಿ ಹಿಂದೂ ಸಂಘಟನೆಯೊಂದು ನಡೆಸಿದ ಪ್ರತಿಭಟನೆಯಲ್ಲಿ ಪೊಲೀಸರ ಲಾಠಿ ಪ್ರಹಾರದಲ್ಲಿ 27 ಮಂದಿ ಗಾಯಗೊಂಡಿದ್ದಾರೆ</p></div>

ಮಸೀದಿ ತೆರವಿಗೆ ಆಗ್ರಹಿಸಿ ಹಿಂದೂ ಸಂಘಟನೆಯೊಂದು ನಡೆಸಿದ ಪ್ರತಿಭಟನೆಯಲ್ಲಿ ಪೊಲೀಸರ ಲಾಠಿ ಪ್ರಹಾರದಲ್ಲಿ 27 ಮಂದಿ ಗಾಯಗೊಂಡಿದ್ದಾರೆ

   

ಪಿಟಿಐ ಚಿತ್ರ

ಉತ್ತರಕಾಶಿ (ಉತ್ತರಾಖಂಡ): ಸರ್ಕಾರಿ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಮಸೀದಿ ಕೆಡವಲು ಆಗ್ರಹಿಸಿ ಹಿಂದೂ ಸಂಘಟನೆಯೊಂದು ನಡೆಸಿದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಏಳು ಮಂದಿ ಪೊಲೀಸರು ಸೇರಿದಂತೆ 27 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸಂಯುಕ್ತ ಹಿಂದೂ ಸಂಘಟನೆ ಆಯೋಜಿಸಿದ್ದ ‘ಜನ ಆಕ್ರೋಶ’ ರ‍್ಯಾಲಿಯನ್ನು ಬೆಂಬಲಿಸಿ ಉತ್ತರಕಾಶಿ, ದುಂಡಾ ಮತ್ತು ಭಟ್ವಾಡಿಗಳಲ್ಲಿ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದವು.

‘ಬರಹತ್‌ ಪ್ರದೇಶದಲ್ಲಿ ನಿರ್ಮಿಸಿರುವ ಮಸೀದಿಯು ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಆದರೆ, ಮಸೀದಿ ಹಳೆಯದಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರ ಜಮೀನಿನಲ್ಲಿ ನಿರ್ಮಿಸಲಾಗಿದೆ’ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

‘ಮಸೀದಿ ಧ್ವಂಸಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಯ ಬೆಂಬಲಿಗರು ಹನುಮಾನ್‌ ಚೌಕ್‌ನಲ್ಲಿ ರ‍್ಯಾಲಿ ನಡೆಸಿದರು. ‘ಜೈ ಶ್ರೀರಾಮ್‌’ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರಲ್ಲಿ ಸ್ವಾಮಿ ದರ್ಶನ ಭಾರತಿ ಕೂಡ ಇದ್ದರು‘ ಎಂದು ಭಟ್ವಾಡಿಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಮುಕೇಶ್‌ ಚಂದ್‌ ರಾಮೋಲಾ ತಿಳಿಸಿದರು.

‘ಪ್ರತಿಭಟನಾಕಾರರನ್ನು ಮಸೀದಿಯತ್ತ ತೆರಳದಂತೆ ತಡೆಯಲು ಪೊಲೀಸರು ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಟ್ವಾಡಿ ಕಡೆಗೆ ಬ್ಯಾರಿಕೇಡ್‌ಗಳನ್ನು ಹಾಕಿದರು. ಈ ಬ್ಯಾರಿಕೇಡ್‌ಗಳನ್ನು ತೆಗೆಯುವಂತೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ಆದರೆ, ಪೊಲೀಸರು ಅವರನ್ನು ಮುಂದೆ ಹೋಗಲು ಬಿಡಲಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವೇಳೆ ಪ್ರತಿಭಟನಾಕಾರರು ಹೆದ್ದಾರಿಯಲ್ಲೇ ಕುಳಿತು ಹನುಮಾನ್‌ ಚಾಲೀಸಾ ಪಠಿಸಲು ಪ್ರಾರಂಭಿಸಿದರು. ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಪ್ರಯತ್ನಿಸಿದರು. ಈ ಕುರಿತು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು ಎಂದು ಅವರು ತಿಳಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಮೊದಲು ಅಶ್ರುವಾಯು ಪ್ರಯೋಗಿಸಿದರು. ಬಳಿಕ ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಏಳು ಮಂದಿ ಪೊಲೀಸರು ಸೇರಿದಂತೆ 27 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕಲ್ಲು ತೂರಾಟದ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರತಿಭಟನೆಯ ಬಳಿಕ ಮಸೀದಿ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.