ADVERTISEMENT

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ: ಚೆನ್ನೈ ಟೆಸ್ಟ್ ಪಂದ್ಯದ ವೇಳೆ ಪ್ರತಿಭಟನೆ

ಪಿಟಿಐ
Published 19 ಸೆಪ್ಟೆಂಬರ್ 2024, 13:19 IST
Last Updated 19 ಸೆಪ್ಟೆಂಬರ್ 2024, 13:19 IST
   

ಚೆನ್ನೈ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಹಿಂದೂ ಮಕ್ಕಳ್ ಕಚ್ಚಿ(ಎಚ್‌ಎಂಕೆ) ಸಂಘಟನೆಯ ಕಾರ್ಯಕರ್ತರು ಚೆನ್ನೈನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಜತೆಗೆ ಭಾರತ–ಬಾಂಗ್ಲಾದೇಶ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯನ್ನು ರದ್ದು ಮಾಡಬೇಕೆಂದೂ ಒತ್ತಾಯಿಸಿದರು.

ಇಂದಿನಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆನ್ನೈನಲ್ಲಿ ಆರಂಭವಾಗಿದೆ. ಕ್ರೀಡಾಂಗಣದ ಹೊರಗೆ ಎಚ್‌ಎಂಕೆ ಅಧ್ಯಕ್ಷ ಅರ್ಜುನ್ ಸಂಪತ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಕೇಂದ್ರ ಸರ್ಕಾರ ಮತ್ತು ವಿಶ್ವಸಂಸ್ಥೆಯನ್ನು ಒತ್ತಾಯಿಸಿದ ಅವರು, ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಟೆಸ್ಟ್ ಸರಣಿಯನ್ನು ನಿಷೇಧಿಸುವಂತೆ ಒತ್ತಾಯಿಸಿದರು.

ADVERTISEMENT

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರಿದಿದೆ. 1971ರಲ್ಲಿ ಆ ದೇಶ ಸ್ವತಂತ್ರವಾದಾಗ ಶೇ 26ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇಕಡ 7ಕ್ಕೆ ಕುಸಿದಿದೆ. ಅವರೂ ಭದ್ರತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಂಪತ್ ಹೇಳಿದ್ದಾರೆ.

ಹಿಂದೂಗಳ ಹತ್ಯೆ, ದೇವಾಲಯಗಳಿಗೆ ಹಾನಿ ಮಾಡಲಾಗುತ್ತಿದೆ. ಮಹಿಳೆಯರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಾಟದಂತ್ಯಕ್ಕೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ. ಶತಕ ಸಿಡಿಸಿರುವ ರವಿಚಂದ್ರನ್ ಅಶ್ವಿನ್(102) ಮತ್ತು ರವೀಂದ್ರ ಜಡೇಜಾ(86) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.