ADVERTISEMENT

ಹಿಂದೂಗಳ ಸಂಖ್ಯೆ ಶೇ 7.8ರಷ್ಟು ಕುಸಿತ; ಮುಸ್ಲಿಮರು ಶೇ43.15 ಏರಿಕೆ: EAC-PM ವರದಿ

ಪಿಟಿಐ
Published 9 ಮೇ 2024, 11:44 IST
Last Updated 9 ಮೇ 2024, 11:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದಹೆಲಿ: ‘ಭಾರತದಲ್ಲಿ 1950ರಿಂದ 2015ರವರೆಗೆ ಹಿಂದೂಗಳ ಜನಸಂಖ್ಯೆ ಶೇ 7.82ರಷ್ಟು ಕುಸಿದಿದ್ದರೆ, ಮುಸ್ಲಿಮರ ಸಂಖ್ಯೆ ಶೇ 43.15ರಷ್ಟು ಹೆಚ್ಚಳವಾಗಿದೆ. ಇದು ದೇಶದಲ್ಲಿ ವೈವಿದ್ಯ ಬೆಳೆಸಲು ಅನುಕೂಲಕರ ವಾತಾವರಣ ಸೃಷ್ಟಿಸಿದೆ’ ಎಂದು ಪ್ರಧಾನಮಂತ್ರಿಗೆ ಆರ್ಥಿಕ ಸಲಹೆ ನೀಡುವ ಸಮಿತಿ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.

‘ಧಾರ್ಮಿಕ ಅಲ್ಪಸಂಖ್ಯಾತರ ಪಾಲು: ಕ್ರಾಸ್ ಕಂಟ್ರಿ ವಿಶ್ಲೇಷಣೆ (1950–2015)’ ಎಂಬ ಶೀರ್ಷಿಕೆಯಡಿ ವರದಿ ಸಲ್ಲಿಸಿರುವ ಈ ಸಮಿತಿಯ ಮುಖ್ಯಸ್ಥರಾದ ಶಮಿಕಾ ರವಿ ಇದರ ಮಾಹಿತಿ ನೀಡಿದ್ದಾರೆ.

ADVERTISEMENT

‘1950ರಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 84.68ರಷ್ಟು ಹಿಂದೂಗಳಿದ್ದರು. ಈಗ ಅವರ ಸಂಖ್ಯೆ ಶೇ 78.06ಕ್ಕೆ ಕುಸಿದಿದೆ. ಅದರಂತೆಯೇ ಮುಸ್ಲಿಮರ ಸಂಖ್ಯೆ ಶೇ 9.84ರಿಂದ ಶೇ 14.09ಕ್ಕೆ ಏರಿಕೆಯಾಗಿದೆ. ಜೈನರ ಸಂಖ್ಯೆ ಕುಸಿದಿದ್ದು, 1950ರಲ್ಲಿ ಶೇ 0.45ರಷ್ಟಿದ್ದರೆ, 2015ರಲ್ಲಿ ಶೇ 0.36ರಷ್ಟಿದೆ’ ಎಂದಿದೆ.

ಭಾರತದಲ್ಲಿ ಅಳಿವಿನಂಚಿಗೆ ಪಾರ್ಸಿಗಳು

‘ಕ್ರೈಸ್ತರ ಸಂಖ್ಯೆ ಶೇ 2.24ರಿಂದ 2.36ರಷ್ಟು ಅಲ್ಪ ಪ್ರಮಾಣದ (ಶೇ 5.38) ಏರಿಕೆ ಕಂಡಿದೆ. ಸಿಖ್ಖರ ಜನಸಂಖ್ಯೆ 1950ರಲ್ಲಿ ಶೇ 1.24ರಷ್ಟಿತ್ತು. 2015ರಲ್ಲಿ ಶೇ 1.85ರಷ್ಟಿದೆ. ಒಟ್ಟು ಶೇ 6.58ರಷ್ಟು ಹೆಚ್ಚಳವಾಗಿದೆ. ಪಾರ್ಸಿ ಸಮುದಾಯ ಭಾರತದಲ್ಲಿ ಅಳವಿನಂಚಿನಲ್ಲಿದೆ ಎಂದೇ ಹೇಳಲಾಗುತ್ತಿದೆ. 2015ರಲ್ಲಿ ಈ ಸಮುದಾಯದ ಜನಸಂಖ್ಯೆ ಪ್ರಮಾಣ ಶೇ 85ರಷ್ಟು ಕುಸಿದಿದೆ. 1950ರಲ್ಲಿ ಪಾರ್ಸಿಗಳು ಶೇ 0.04ರಷ್ಟಿದ್ದರು. 2015ರಲ್ಲಿ ಭಾರತದ ಒಟ್ಟು ಜನಸಂಖ್ಯೆಯ ಶೇ 0.004ರಷ್ಟಿದ್ದಾರೆ’ ಎಂದು ವರದಿ ಹೇಳಿದೆ.

‘ಸಮಾಜದಲ್ಲಿ ವಿವಿಧತೆ ತರಲು ಸದ್ಯ ಉತ್ತಮ ವಾತಾವರಣವಿದೆ. ಆದರೆ ಕೆಳಸ್ತರದಲ್ಲಿರುವವರಿಗೆ ಸೂಕ್ತ ಬೆಂಬಲದ ವಾತಾವರಣ ಒದಗಿಸದ ಹೊರತು ಉತ್ತಮ ಫಲಿತಾಂಶ ನಿರೀಕ್ಷಿಸುವುದು ಅಸಾಧ್ಯ’ ಎಂದು ಸಮಿತಿ ಹೇಳಿದೆ.

‘ಬಹುಸಂಖ್ಯಾತರ ಜನಸಂಖ್ಯೆಯಲ್ಲಿನ ಕುಸಿತ ಮತ್ತು ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿನ ಹೆಚ್ಚಳಕ್ಕೆ ನೀತಿಗಳ ನಿರೂಪಣೆ, ಸರ್ಕಾರದ ಯೋಜನೆಗಳ ಫಲಿತಾಂಶವೇ ಕಾರಣ ಎಂದೇ ಭಾವಿಸಬಹುದು. ಮತ್ತೊಂದೆಡೆ ಜಾಗತಿಕ ಮಟ್ಟದಲ್ಲೂ ಬಹುಸಂಖ್ಯಾತರ ಜನಸಂಖ್ಯೆ ಕುಸಿಯುತ್ತಿದೆ. ಭಾರತದಲ್ಲೂ ಇದೇ ರೀತಿಯ ವಾತಾವರಣವಿದೆ’ ಎಂದಿದೆ.

‘ಮತ್ತೊಂದೆಡೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಬಹುಸಂಖ್ಯಾತರ ಜನಸಂಖ್ಯೆ ಏರಿಕೆಯಾಗಿದೆ. ಅದರಲ್ಲೂ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್ ಹಾಗೂ ಆಫ್ಗಾನಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. 1915ರ ನಂತರದಲ್ಲಿ ನೆರೆಯ ರಾಷ್ಟ್ರಗಳಲ್ಲಿ ಆಂತರಿಕ ಒತ್ತಡ ಹೆಚ್ಚಾದ ಕಾರಣ ಬಹಳಷ್ಟು ಜನ ಭಾರತಕ್ಕೆ ವಲಸೆ ಬಂದಿದ್ದಾರೆ’ ಎಂದು ವರದಿ ಹೇಳಿದೆ.

ಮುಸ್ಲಿಂ ಜನಸಂಖ್ಯೆ ಹೆಚ್ಚಳ

ಮಾಲ್ದೀವ್ಸ್‌ ಹೊರತುಪಡಿಸಿ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ ಸುನ್ನಿಗಳ ಸಂಖ್ಯೆ ಶೇ 1.47ರಷ್ಟು ಕುಸಿದಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಶೇ 18ರಷ್ಟು ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ಶೇ 3.75ರಷ್ಟು ಹೆಚ್ಚಳವಾಗಿದೆ.

‘ಮುಸ್ಲಿಮೇತರ ರಾಷ್ಟ್ರಗಳಾದ ಮ್ಯಾನ್ಮಾರ, ಭಾರತ, ನೇಪಾಳದಲ್ಲಿ ಧಾರ್ಮಿಕ ಬಹುಸಂಖ್ಯಾತರ ಸಂಖ್ಯೆ ಕುಸಿದಿದೆ. ಮಾನವ ಹಕ್ಕುಗಳನ್ನು ಎತ್ತಿ ಹಿಡಿಯಲು ಹಿಂದಿನಿಂದಲೂ ಸಾಕಷ್ಟು ಕಾನೂನುಗಳು ಇದ್ದವು. ವಿಶ್ವ ಸಂಸ್ಥೆಯ ರಚನೆಯ ನಂತರ ಅದಕ್ಕೊಂದು ಸ್ಪಷ್ಟ ಸ್ವರೂಪ ದೊರೆಯಿತು. ಅಲ್ಪಸಂಖ್ಯಾತರ ಹಿತ ಕಾಯುವುದು ಆಯಾ ರಾಷ್ಟ್ರಗಳ ಹೊಣೆಯಾಗಿದೆ ಎಂದು ಅಂತರರಾಷ್ಟ್ರೀಯ ಕಾನೂನು ಹೇಳುತ್ತದೆ. 167 ರಾಷ್ಟ್ರಗಳನ್ನು ವಿಶ್ಲೇಷಿಸಿದರೆ, ಧಾರ್ಮಿಕ ಬಹುಸಂಖ್ಯಾತರ ಒಟ್ಟು ಸಂಖ್ಯೆ ಶೇ 75ರಷ್ಟಿದೆ. ಆದರೆ ಧಾರ್ಮಿಕ ಬಹುಸಂಖ್ಯಾತರ ಒಟ್ಟು ಪಾಲು 1950ರಿಂದ 2015ರವರೆಗೆ ಶೇ 21.9ರಷ್ಟು ಬದಲಾವಣೆ ಕಂಡಿದೆ’ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.