ADVERTISEMENT

ಲಖನೌ| ರಾಧಾ ರಾಣಿ ಕುರಿತು ಹೇಳಿಕೆ: ನೆಲಕ್ಕೆ ಮೂಗು ಉಜ್ಜಿ ಕ್ಷಮೆಯಾಚಿಸಿದ ಕಥಾವಾಚಕ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:30 IST
Last Updated 30 ಜೂನ್ 2024, 15:30 IST
ಪ್ರದೀಪ್‌ ಮಿಶ್ರಾ
ಪ್ರದೀಪ್‌ ಮಿಶ್ರಾ   

ಲಖನೌ: ‘ರಾಧಾ ರಾಣಿ’ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಬೃಜ್‌ ಪ್ರಾಂತ್ಯದಲ್ಲಿ ಸಂತ ಸಮುದಾಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಖ್ಯಾತ ಕಥಾವಾಚಕ, ಹಿಂದೂ ಧರ್ಮದರ್ಶಿ ಪಂಡಿತ್‌ ಪ್ರದೀಪ್‌ ಮಿಶ್ರಾ ಅವರು ಬರ್ಸಾನಾದ ‘ರಾಧಾ–ರಾಣಿ‌’ ದೇವಸ್ಥಾನದಲ್ಲಿ ಸಾಷ್ಟಾಂಗ ನಮಸ್ಕರಿಸಿ, ಮೂಗನ್ನು ನೆಲಕ್ಕೆ ಉಜ್ಜಿ ಕ್ಷಮೆಯಾಚಿಸಿದರು.  

‘ರಾಧಾ ರಾಣಿ’ ಭಗವಾನ್‌ ಶ್ರೀ ಕೃಷ್ಣನ ಪತ್ನಿಯಲ್ಲ. ಆಕೆ ಚಾತಾ ಗ್ರಾಮದ ನಿವಾಸಿ ಅನಯ್‌ ಘೋಷ್‌ ಅನ್ನು ಮದುವೆಯಾಗಿದ್ದಳು. ಆಕೆಯೂ ಬರ್ಸಾನಾಕ್ಕೆ ಸೇರಿದ‌ವಳಲ್ಲ,‌ ಆಕೆಯ ತಂದೆ ವೃಷಭಾನು ವರ್ಷಕ್ಕೊಮ್ಮೆ ಬರ್ಸಾನಾಕ್ಕೆ ಭೇಟಿ ನೀಡುತ್ತಿದ್ದರು. ಈ ಕಾರಣದಿಂದ, ಆಕೆ ಹೆಸರಿನ ಮುಂದೆ ‘ಬರ್ಸಾನಾ’ವು ಸೇರಿಕೊಂಡಿದೆ ಎಂದು ‌ಸೆಹೊರ್‌ನ ಕುಬೇರೇಶ್ವರ ಧಾಮದ ಮುಖ್ಯಸ್ಥ, ಖ್ಯಾತ ಕಥಾವಾಚಕ ಪ್ರದೀಪ್‌ ಮಿಶ್ರಾ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಮಥುರಾ, ಬೃಂದಾವನ, ಬರ್ಸಾನಾ, ಅಯೋಧ್ಯೆ, ಹರಿದ್ವಾರ (ಬೃಜ್‌ ಪ್ರಾಂತ್ಯ) ಸೇರಿದಂತೆ ಹಲವು ಕಡೆಗಳಲ್ಲಿ ಸಂತ ಸಮುದಾಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಮಿಶ್ರಾ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದರು. ದೇಶದ ವಿವಿಧ ಭಾಗದ ಸಂತರು ಇತ್ತೀಚಿಗೆ ‘ಮಹಾಪಂಚಾಯತ್‌’ ನಡೆಸಿ, ಮಿಶ್ರಾ ಹೇಳಿಕೆಯ ವಿರುದ್ಧ ಎಫ್‌ಐಆರ್‌ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದರು. ಬೃಜ್‌ ಪ್ರಾಂತ್ಯ ಪ್ರವೇಶಿಸದಂತೆ ತಡೆಯುವುದಾಗಿ ಘೋಷಿಸಿದ್ದ ಸಂತರು, ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಶನಿವಾರ ಬರ್ಸಾನಾದ ಲಾಡ್ಲಿ ದೇವಾಲಯ (ರಾಧಾ ಜನ್ಮಸ್ಥಳ)ಕ್ಕೆ ಭೇಟಿ ನೀಡಿದ್ದ ಪ್ರದೀಪ್‌ ಮಿಶ್ರಾ, ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದರು. ಹಲವಾರು ಜನರ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, ದೇವರ ಮುಂಭಾಗದ ನೆಲದ ಮೇಲೆ ತಮ್ಮ ಮೂಗು ಉಜ್ಜಿ ಪ್ರಾಯಶ್ಚಿತ ಮಾಡಿಕೊಂಡರು. ‘ಮಿಶ್ರಾ ಅಧ್ಯಾಯ ಇಲ್ಲಿಗೆ ಮುಗಿದಿದೆ’ ಎಂದು ಬರ್ಸಾನಾದ ಧಾರ್ಮಿಕ ಪಂಡಿತರೊಬ್ಬರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.