ADVERTISEMENT

ಮಹಾಕುಂಭ: ಕೇವಲ ‘ಸನಾತನಿ’ ಅಧಿಕಾರಿಗಳ ನಿಯೋಜನೆಗೆ ಮಠಾಧೀಶರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:31 IST
Last Updated 19 ಅಕ್ಟೋಬರ್ 2024, 13:31 IST
   

ಲಖನೌ: ಪ್ರಯಾಗ್‌ರಾಜ್‌ದಲ್ಲಿ ಮುಂದಿನ ವರ್ಷ ನಡೆಯಲಿರುವ ‘ಮಹಾಕುಂಭ’ದ ವೇಳೆ ‘ಸನಾತನಿ’ ಅಧಿಕಾರಿಗಳನ್ನು ಮಾತ್ರ ನಿಯೋಜನೆ ಮಾಡುವಂತೆ ಮಠಾಧೀಶರು ಆಗ್ರಹಿಸಿದ್ದಾರೆ.

ಮಠಾಧೀಶರ ಸಂಘಟನೆಯಾದ ಅಖಿಲ ಭಾರತ ಅಖಾಡಾ ಪರಿಷತ್‌(ಎಐಎಪಿ) ಈ ಬೇಡಿಕೆ ಇಟ್ಟಿದೆ. 

ಎಐಎಪಿ, 13 ‘ಅಖಾಡಾ’ಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ. ಸನಾತನ ಧರ್ಮ ರಕ್ಷಣೆಗಾಗಿ 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಸಾಧು–ಸಂತರು ಹಾಗೂ ಮಠಾಧೀಶರ ಏಕತೆಗಾಗಿ ‘ಅಖಾಡಾ’ಗಳನ್ನು ಸ್ಥಾಪಿಸಿದ್ದರು.

ADVERTISEMENT

ಕುಂಭಮೇಳವು ಮುಂದಿನ ಜನವರಿ 14ರಂದು ಆರಂಭವಾಗಿ, ಫೆಬ್ರುವರಿ 26ಕ್ಕೆ ಮುಕ್ತಾಯಗೊಳ್ಳುವುದು. ಈ ವೇಳೆ, ಜನರು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ‘ಪುಣ್ಯ ಸ್ನಾನ’ ವಿಧಿ ಪೂರೈಸುತ್ತಾರೆ. ದೇಶ– ವಿದೇಶಗಳ ಬರುವ ಲಕ್ಷಾಂತರ ಜನರು ಈ ಮೇಳದಲ್ಲಿ ಪಾಲ್ಗೊಳ್ಳುವರು.

‘ಕುಂಭ ಮೇಳ (ಮಹಾಕುಂಭ) ನಡೆಯುವ ಪ್ರದೇಶದಲ್ಲಿ ಕೇವಲ ಸನಾತನಿ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಸನಾತನಿಯಲ್ಲದ ಅಧಿಕಾರಿಗೆ ಈ ಪ್ರದೇಶದಲ್ಲಿ ಪ್ರವೇಶ ನೀಡಬಾರದು’ ಎಂದು ಎಐಎಪಿ ಪ್ರಧಾನ ಕಾರ್ಯದರ್ಶಿ ಹಾಗೂ ‘ಜುನಾ ಅಖಾಡಾ’ದ ಮಹಾಪೋಷಕ ಮಹಂತ ಹರಿ ಗಿರಿ ಅವರು ಇತ್ತೀಚೆಗೆ ನಡೆದ ಪರಿಷತ್‌ ಸಭೆಯಲ್ಲಿ ಹೇಳಿದರು.

‘ಕುಂಭಮೇಳದಲ್ಲಿ ಸನಾತನಿಗಳಿಗಷ್ಟೆ ಪ್ರವೇಶ ನೀಡಬೇಕು. ಇದಕ್ಕಾಗಿ, ಪ್ರತಿಯೊಬ್ಬರ ಗುರುತಿನ ಚೀಟಿ ಪರಿಶೀಲಿಸಿದ ನಂತರವೇ ಒಳಗೆ ಬಿಡಬೇಕು’ ಎಂದರು.

‘ಕುಂಭಮೇಳ ಪ್ರದೇಶದಲ್ಲಿ ಸನಾತನಿಯಲ್ಲದ ಜನರಿಗೆ ಆಹಾರ ಮಳಿಗೆ ಅಳವಡಿಸಲು ಅವಕಾಶ ನೀಡಬಾರದು. ಪ್ರದೇಶದ ಸಮೀಪದಲ್ಲಿ ಕೂಡ ಮದ್ಯ ಮತ್ತು ಮಾಂಸ ಮಾರಾಟಕ್ಕೆ ಅವಕಾಶ ನೀಡಬಾರದು’ ಎಂದು ಎಐಎಪಿ ಒತ್ತಾಯಿಸಿದೆ.

ದೀಪಾವಳಿ ನಂತರ ಎಐಎಪಿ ಸಭೆ ನಡೆಸಿ ಈ ಕುರಿತ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಕಳುಹಿಸಿ ಕೊಡಲಾಗುವುದು
ಮಹಂತ ಹರಿ ಗಿರಿ ಎಐಎಪಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.