ನವದೆಹಲಿ: ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪತ್ತೆಯಾಗಿದೆ ಎನ್ನಲಾದ ‘ಶಿವಲಿಂಗ’ದ ವೈಶಿಷ್ಟ್ಯಗಳು ಹಾಗೂ ಅದರ ಸ್ವರೂಪವನ್ನು ಪತ್ತೆ ಮಾಡುವುದಕ್ಕಾಗಿ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ನಾಲ್ವರೂ ಮಹಿಳೆಯರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
‘ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ಮುಂದೂಡಿ 2023ರ ಮೇ 19ರಂದು ನೀಡಿದ್ದ ಆದೇಶ, ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾದ ‘ಶಿವಲಿಂಗ’ದ ಕಾಲಮಾನ ಪತ್ತೆಗಾಗಿ ಅಲಹಾಬಾದ್ ಹೈಕೋರ್ಟ್ ಕಳೆದ ವರ್ಷ ಮೇ 12ರಂದು ನೀಡಿದ್ದ ನಿರ್ದೇಶನದಂತೆ ನಡೆಯಬೇಕಿದ್ದ ಕಾರ್ಬನ್ ಡೇಟಿಂಗ್ ಪರೀಕ್ಷೆ ಮುಂದೂಡಿ ತಾನು ನೀಡಿದ್ದ ಆದೇಶವನ್ನು ತೆರವುಗೊಳಿಸುವಂತೆಯೂ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
‘ಶಿವಲಿಂಗ ಸುತ್ತಲೂ ನಿರ್ಮಿಸಿರುವ ಕೃತಕ/ಆಧುನಿಕ ಗೋಡೆಗಳು ಹಾಗೂ ನೆಲಹಾಸನ್ನು ತೆರವು ಮಾಡಿ, ವೈಜ್ಞಾನಿಕ ಪರೀಕ್ಷೆ ಕೈಗೊಂಡಾಗ ಮಾತ್ರ ಅದರ ನಿಖರವಾದ ಸ್ವರೂಪವನ್ನು ಪತ್ತೆ ಮಾಡಲು ಸಾಧ್ಯ. ಇದಕ್ಕಾಗಿ ಈಗ ಮುಚ್ಚಲಾಗಿರುವ ಪ್ರದೇಶದ ಉತ್ಖನನ ನಡೆಸಬೇಕು ಹಾಗೂ ಇತರ ವೈಜ್ಞಾನಿಕ ವಿಧಾನಗಳನ್ನು ಬಳಸಿ ಸಮೀಕ್ಷೆ ನಡೆಸಬೇಕು’ ಎಂದೂ ಅರ್ಜಿದಾರರು ಮನವಿ ಮಾಡಿದ್ದಾರೆ.
ಈ ಕುರಿತು ವಕೀಲ ವಿಷ್ಣುಶಂಕರ್ ಜೈನ್ ಅವರ ಮೂಲಕ ಅರ್ಜಿಗಳನ್ನು ಸಲ್ಲಿಸಿರುವ ಮಹಿಳೆಯರು, ಕೋರ್ಟ್ ನಿಗದಿಪಡಿಸುವ ಕಾಲಮಿತಿಯೊಳಗೆ ವರದಿ ಸಲ್ಲಿಸುವಂತೆ ಎಎಸ್‌ಐಗೆ ನಿರ್ದೇಶನ ನೀಡುವಂತೆಯೂ ಕೋರಿದ್ದಾರೆ.
ಆದೇಶ ಕಾಯ್ದಿರಿಸಿದ ವಾರಾಣಸಿ ನ್ಯಾಯಾಲಯ
ಲಖನೌ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ (ತೆಹಖಾನಾ) ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಹಿಂದೂ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ವಾರಾಣಸಿ ಜಿಲ್ಲಾ ನ್ಯಾಯಾಲಯ, ಈ ಕುರಿತ ಆದೇಶವನ್ನು ಮಂಗಳವಾರ ಕಾಯ್ದಿರಿಸಿತು.
‘ವಾದ–ಪ್ರತಿವಾದಗಳನ್ನು ಆಲಿಸಿರುವ ಜಿಲ್ಲಾ ನ್ಯಾಯಾಲಯವು ಬುಧವಾರ ಆದೇಶ ಪ್ರಕಟಿಸುವ ಸಂಭವ ಇದೆ’ ಎಂದು ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣುಶಂಕರ್ ಜೈನ್ ತಿಳಿಸಿದ್ದಾರೆ.
ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸುವ ಹಿಂದೂಗಳ ಹಕ್ಕನ್ನು ಮತ್ತೆ ಒದಗಿಸಿಕೊಡುವಂತೆ ಜೈನ್ ಕೋರಿದ್ದಾರೆ.
ವಾದ–ಪ್ರತಿವಾದವೇನು?: ಮಸೀದಿಯ ನೆಲಮಾಳಿಗೆಯಲ್ಲಿ ಸೋಮನಾಥ ವ್ಯಾಸ ಮತ್ತು ಅವರ ಕುಟುಂಬದವರು 1993ರ ವರೆಗೆ ಪೂಜೆ ಸಲ್ಲಿಸುತ್ತಿದ್ದರು. ಆಗ, ಅಧಿಕಾರದಲ್ಲಿದ್ದ ಮುಲಾಯಂ ಸಿಂಗ್ ಯಾದವ್ ಸರ್ಕಾರವು 1993ರ ನವೆಂಬರ್‌ನಲ್ಲಿ ಇಲ್ಲಿ ಪೂಜೆ ಸಲ್ಲಿಸುವುದನ್ನು ನಿಷೇಧಿಸಿತು ಎನ್ನುವುದು ಹಿಂದೂ ಅರ್ಜಿದಾರರ ವಾದವಾಗಿದೆ.
ಆದರೆ, ಮಸೀದಿಯ ನಿರ್ವಹಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಂಜುಮನ್ ಇಂತೆಜಾಮಿಯಾ, ಹಿಂದೂಗಳ ವಾದವನ್ನು ವಿರೋಧಿಸಿದೆ.
‘ನೆಲಮಾಳಿಗೆಯು ಮಸೀದಿಯ ಭಾಗವೇ ಆಗಿದ್ದು, ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬಾರದು’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.