ADVERTISEMENT

ಗ್ಯಾನವಾಪಿ ಆವರಣ ಅಗೆಯಲು ಎಎಸ್ಐಗೆ ಅನುಮತಿ: ಹಿಂದೂಗಳ ಕೋರಿಕೆ

​ಪ್ರಜಾವಾಣಿ ವಾರ್ತೆ
ಪಿಟಿಐ
Published 11 ಸೆಪ್ಟೆಂಬರ್ 2024, 15:25 IST
Last Updated 11 ಸೆಪ್ಟೆಂಬರ್ 2024, 15:25 IST
ಗ್ಯಾನವಾಪಿ ಮಸೀದಿ
ಗ್ಯಾನವಾಪಿ ಮಸೀದಿ   

- ಪಿಟಿಐ ಚಿತ್ರ

ಲಖನೌ/ವಾರಾಣಸಿ: ಗ್ಯಾನವ್ಯಾಪಿ ಮಸೀದಿ ಸಂಕೀರ್ಣದ ಆವರಣದಲ್ಲಿ ದೇವಸ್ಥಾನವಿದೆ ಎಂದು ವಾದಿಸಿ, ಇಡೀ ಗ್ಯಾನವಾಪಿ ಮಸೀದಿ ಆವರಣವನ್ನು ಯಂತ್ರಗಳಿಂದ ಅಗೆದು ಪುರಾವೆ ಸಂಗ್ರಹಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅನುಮತಿ ನೀಡಲು ಕೋರಿ ಹಿಂದೂ ಭಕ್ತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಾರಾಣಸಿ ನ್ಯಾಯಾಲಯ ಬುಧವಾರ ಪೂರ್ಣಗೊಳಿಸಿದೆ.

ತ್ವರಿತ ನ್ಯಾಯಾಲಯದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶ ಜುಗಲ್ ಶಂಭು ಅವರು, ಮಸೀದಿ ನಿರ್ವಹಣೆ ನೋಡಿಕೊಳ್ಳುವ ಅಂಜುಮನ್ ಇಂತೇಜಾಮಿಯಾ ಸಮಿತಿಯ ಅರ್ಜಿ ವಿಚಾರಣೆಯನ್ನು ಇದೇ 18ಕ್ಕೆ ನಿಗದಿಪಡಿಸಿದ್ದಾರೆ.

ADVERTISEMENT

ಹಿಂದೂ ಭಕ್ತರು ತಮ್ಮ ಅರ್ಜಿಯಲ್ಲಿ ಮಸೀದಿಯ ಪ್ರಧಾನ ಗುಮ್ಮಟದ ಅಡಿ ಶಿವಲಿಂಗವಿದೆ ಎಂದೂ ವಾದಿಸಿದ್ದಾರೆ. 

ಹಿಂದೂ ಭಕ್ತರ ಪರ ವಾದಿಸಿದ ವಕೀಲ ವಿಜಯ್ ಶಂಕರ್ ರಸ್ತೋಗಿ ಅವರು ‘ಜ್ಞಾನ ಕುಂಡ’ದಲ್ಲಿ ಸಂಗ್ರಹವಾಗುವ ನೀರು ಶಿವಲಿಂಗದ ಮೇಲೆ ನಿರಂತರವಾಗಿ ಹರಿಯುತ್ತಿತ್ತು. ಇದಕ್ಕೆ ಪುರಾವೆ ಸಂಗ್ರಹಿಸಲು ಸಂಪೂರ್ಣ ಗ್ಯಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ಅತ್ಯಗತ್ಯ. ಯಂತ್ರಗಳ ಮೂಲಕ ಆವರಣವನ್ನು ಅಗೆಯುವ ಅಗತ್ಯವಿದೆ ಎಂದು ಹೇಳಿದರು.

ಎಎಸ್‌ಐ, ಮಸೀದಿಯ ಒಂದು ಭಾಗದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿದ್ದರೂ ಅದು ಪೂರ್ಣಗೊಂಡಿಲ್ಲ. ಅಗೆಯಲು ಯಂತ್ರ ಬಳಸಿಲ್ಲ. ಆವರಣವನ್ನು ಅಗೆದೂ ಇಲ್ಲ ಎಂದು ಅವರು ಹೇಳಿದರು. 

ಎಎಸ್‌ಐ ವರದಿಯ ಪ್ರಕಾರ, ಮಸೀದಿಯ ಸ್ಥಳದಲ್ಲಿ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು. 17ನೇ ಶತಮಾನದಲ್ಲಿ ಹಿಂದೂ ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬುದಕ್ಕೆ ಪುರಾವೆಗಳಿವೆ ಎಂದು ಕಾಶಿ ವಿಶ್ವನಾಥ ದೇವಸ್ಥಾನ-ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂ ಭಕ್ತರ ಪರ ವಾದಿಸುತ್ತಿರುವ ವಕೀಲರು ಹೇಳಿದ್ದಾರೆ.

ವಾರಾಣಸಿಯ ನ್ಯಾಯಾಲಯವೊಂದು ಕಳೆದ ವರ್ಷ, ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗಾಗಿ ಎಎಸ್‌ಐ ಮಾಡಿದ್ದ ಮನವಿಯನ್ನು ಪುರಸ್ಕರಿಸಿತ್ತು. ಆದರೆ, ‘ವಜುಖಾನಾ’ (ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಮೊದಲು ಕೈ ತೊಳೆಯಲು ಬಳಸುವ ಸ್ಥಳ) ಸಮೀಕ್ಷೆ ನಡೆಸುವುದಿಲ್ಲ ಎಂದು ಅದು ಹೇಳಿದೆ. ಹಿಂದೂ ಭಕ್ತರ ಅರ್ಜಿಯು ‘ವಜುಖಾನ’ದ ವೈಜ್ಞಾನಿಕ ಸಮೀಕ್ಷೆಯನ್ನು ಸಹ ಕೋರಿದೆ. 

ಆದಾಗ್ಯೂ ಮುಸ್ಲಿಮರ ಕಡೆಯವರು ಹಿಂದೂಗಳ ವಾದವನ್ನು ನಿರಾಕರಿದ್ದು, ಇದಕ್ಕೆ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. 

ವೈಜ್ಞಾನಿಕ ಸಮೀಕ್ಷೆ ನಡೆಸಲು ವಾರಾಣಸಿ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ಕೋರಿ ಮುಸ್ಲಿಂ ದಾವೆದಾರರು ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ ತಿರಸ್ಕರಿಸಿದ ನಂತರ ಗ್ಯಾನವಾಪಿ ಮಸೀದಿ ಆವರಣದ ಸಮೀಕ್ಷೆ ಕೈಗೊಳ್ಳಲಾಯಿತು. ಸುಪ್ರೀಂ ಕೋರ್ಟ್‌ ಕೂಡ ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.