ಜಂಗೀಪುರ: ಈ ಬಾರಿಯ ಲೋಕಸಭೆ ಚುನಾವಣೆಗೆ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಬಿಜೆಪಿ ರಾಜಕೀಯ ತಂತ್ರವಾಗಿ ಬಳಸುತ್ತಿದೆ. ಇದರಿಂದ ಹಿಂದೂಗಳಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ನಂತರ ಸೋಲುವ ಭೀತಿಯಲ್ಲಿರುವ ಬಿಜೆಪಿ ಒಡೆದು ಆಳುವ ತಂತ್ರವನ್ನು ಅನುಸರಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಪ್ರತಿ ಬಾರಿ ಚುನಾವಣೆ ಬಂದಾಗಲೆಲ್ಲಾ ಕೋಮು ಉದ್ವಿಗ್ನತೆಯನ್ನು ಉಂಟು ಮಾಡಲು ಯಾವುದಾದರೊಂದು ವಿಷಯವನ್ನು ಬಿಜೆಪಿ ಪ್ರಸ್ತಾಪಿಸುತ್ತದೆ. ಅದೇ ರೀತಿ ಈ ಬಾರಿ ಯುಸಿಸಿಯನ್ನು ಬಳಸುತ್ತಿದೆ ಹಾಗೂ ಇದು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧವಾಗಿದೆ ಎಂದು ಪ್ರಚಾರ ಮಾಡುತ್ತಿದೆ. ಯುಸಿಸಿಯಿಂದ ಹಿಂದೂಗಳಿಗೆ ಯಾವುದೇ ಲಾಭವಿಲ್ಲ’ ಎಂದು ಅವರು ಹೇಳಿದ್ದಾರೆ.
ದೇಶದಾದ್ಯಂತ ಬಿಜೆಪಿ ವಿರೋಧಿ ಮನೋಭಾವ ಬೆಳೆಯುತ್ತಿದೆ. ಲೋಕಸಭೆ ಚುನಾವಣೆಯ ಮೊದಲೆರಡು ಹಂತದ ಶೇಕಡವಾರು ಮತದಾನವನ್ನು ನೋಡಿದ ನಂತರ, ಬಿಜೆಪಿ ಸೋತಿದೆ ಮತ್ತು ಇನ್ನೂಳಿದ ಐದು ಹಂತಗಳಲ್ಲೂ ಸೋಲಲಿದೆ ಎಂಬುದನ್ನು ನಾವು ವಿಶ್ವಾಸದಿಂದ ಹೇಳಬಹುದಾಗಿದೆ. ಸೋಲಿನ ಭೀತಿ ಬಿಜೆಪಿಯನ್ನು ಆವರಿಸಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
‘ಸಿಎಎ ಎನ್ನುವುದು ಕಾನೂನುಬದ್ಧ ಪ್ರಜೆಗಳನ್ನು ವಿದೇಶಿಯರನ್ನಾಗಿ ಪರಿವರ್ತಿಸುವ ಬಲೆಯಾಗಿದೆ. ಒಮ್ಮೆ ಸಿಎಎ ಜಾರಿಗೆ ಬಂದರೆ, ಎನ್‌ಆರ್‌ಸಿ ಅದರ ನಂತರ ಬರುತ್ತದೆ. ನಾವು ಸಿಎಎ ಆಗಲಿ, ಎನ್‌ಆರ್‌ಸಿ ಆಗಲಿ ಪಶ್ಚಿಮ ಬಂಗಾಳದಲ್ಲಿ ಜಾರಿ ಮಾಡಲು ಬಿಡುವುದಿಲ್ಲ’ ಎಂದು ಅವರು ಪುನರುಚ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.