ಧರ್: ವಿವಾದಿತ ಭೋಜಶಾಲಾ–ಕಮಲ ಮೌಲಾ ಮಸೀದಿ ಸಂಕೀರ್ಣದಲ್ಲಿ ಹಿಂದೂಗಳು ಮಂಗಳವಾರ ಪೂಜೆ ಸಲ್ಲಿಸಿದರು. ಈ ನಡುವೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ತಂಡವೊಂದು ಸ್ಥಳದಲ್ಲಿ ಸಮೀಕ್ಷಾ ಕಾರ್ಯವನ್ನು ಮುಂದುವರಿಸಿದೆ.
2003ರ ಏಪ್ರಿಲ್ 7ರಂದು ಎಎಸ್‌ಐ ಹೊರಡಿಸಿದ ಆದೇಶವೊಂದರ ಅನ್ವಯ ಹಿಂದೂಗಳಿಗೆ ಈ ಸಂಕೀರ್ಣದಲ್ಲಿ ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಅವಕಾಶ ಇದೆ. ಮುಸ್ಲಿಮರಿಗೆ ಪ್ರತಿ ಶುಕ್ರವಾರ ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹಿಂದೂ ಭಕ್ತರು ಮಂಗಳವಾರ ಸಮೀಕ್ಷೆ ಆರಂಭಕ್ಕೂ ಮುನ್ನ, ಬೆಳಿಗ್ಗೆ 7.15ರ ಸುಮಾರಿಗೆ ಈ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದರು. ಈ ಸ್ಥಳದಲ್ಲಿ ಇರುವುದು ವಾಗ್ದೇವಿ (ಸರಸ್ವತಿ) ದೇವಸ್ಥಾನ ಎಂದು ಹಿಂದೂಗಳು ನಂಬುತ್ತಾರೆ. ಆದರೆ ಇದು ಮಸೀದಿ ಎಂಬುದು ಮುಸ್ಲಿಮರಲ್ಲಿನ ನಂಬಿಕೆ.
ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಅನುಸಾರ ಎಎಸ್‌ಐ ಅಧಿಕಾರಿಗಳು ಇಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ.
ಎಎಸ್‌ಐ ನಡೆಸುತ್ತಿರುವ ಸಮೀಕ್ಷೆಯಿಂದಾಗಿ ಈ ವಿವಾದಕ್ಕೆ ಪರಿಹಾರ ಸಿಗುತ್ತದೆ ಎಂದು ಭೋಜ ಉತ್ಸವ ಸಮಿತಿಯ ಉಪಾಧ್ಯಕ್ಷ ಬಲವೀರ್ ಸಿಂಗ್ ಹೇಳಿದ್ದಾರೆ. ಇದು ಸರಸ್ವತಿಯ ದೇವಸ್ಥಾನ ಆಗಿತ್ತು, ಇದನ್ನು ಹಿಂದೂಗಳಿಗೆ ಮರಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.