ADVERTISEMENT

ಸಿಸೋಡಿಯಾ ಅವರನ್ನು ಪುರಾಣ ಪ್ರಸಿದ್ಧ ಪ್ರಹ್ಲಾದನ ಪಾತ್ರಕ್ಕೆ ಹೋಲಿಸಿದ ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2023, 11:06 IST
Last Updated 10 ಮಾರ್ಚ್ 2023, 11:06 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌    

ನವದಹೆಲಿ: ಹಿರಣ್ಯ ಕಶಿಪು ತನ್ನನ್ನು ತಾನು ದೇವರೆಂದು ಭಾವಿಸಿದ್ದ. ದೇವರ ಮಾರ್ಗದಲ್ಲಿ ನಡೆಯುವ ಪ್ರಹ್ಲಾದನನ್ನು ತಡೆಯಲು ಅನೇಕ ಪ್ರಯತ್ನಗಳನ್ನು ಮಾಡಿದ್ದ. ಇಂದಿಗೂ ಕೆಲವರು ಹಾಗೇ ಮಾಡುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್‌ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ.

ದೆಹಲಿಯ ಅಬಕಾರಿ ನೀತಿ ಜಾರಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಬಂಧಿಸಿಸಿದೆ. ಸಿಸೋಡಿಯಾ ಬಂಧನವಾದಾಗಿನಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಕೇಜ್ರಿವಾಲ್‌ ತೀವ್ರ ವಾಗ್ದಾಳಿ ನಡೆಸುತ್ತಲೇ ಬಂದಿದ್ದು, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರ ಸಿಸೋಡಿಯಾ ಅವರಿಗೆ ನೀಡಿರುವ ಶಿಕ್ಷೆ ಇದು ಎಂದು ಎಎಪಿ ಹೇಳುತ್ತಾ ಬಂದಿದೆ.

ಈ ಮಧ್ಯೆ ಟ್ವೀಟ್‌ ಮಾಡಿರುವ ಅರವಿಂದ ಕೇಜ್ರಿವಾಲ್‌ ಸಂಪೂರ್ಣ ಘಟನೆಯನ್ನು ಹಿರಣ್ಯ ಕಶಿಪುವಿನ ಮೂಲಕ ವಿವರಿಸುವ ಪ್ರಯತ್ನ ಮಾಡಿದ್ದಾರೆ.

ADVERTISEMENT

‘ಹಿರಣ್ಯಕಶಿಪು ತನ್ನನ್ನು ತಾನು ದೇವರೆಂದು ಭಾವಿಸಿದ್ದ. ದೇವರ ಮಾರ್ಗದಿಂದ ಪ್ರಹ್ಲಾದನನ್ನು ತಡೆಯಲು ಅವನು ಅನೇಕ ಪ್ರಯತ್ನಗಳನ್ನು ಮಾಡಿದ್ದ. ದುಷ್ಕೃತ್ಯಗಳನ್ನೂ ಮಾಡಿದ್ದ. ಇಂದಿಗೂ ಕೆಲವರು ತಮ್ಮನ್ನು ತಾವು ದೇವರೆಂದು ಭಾವಿಸುತ್ತಾರೆ. ದೇಶ ಮತ್ತು ಮಕ್ಕಳ ಸೇವೆ ಮಾಡಿದ ಪ್ರಲ್ಹಾದನನ್ನು ಜೈಲಿಗೆ ಹಾಕಲಾಗಿದೆ. ಆಗಲೂ ಪ್ರಹ್ಲಾದನನ್ನು ತಡೆಯಲಾಗಲಿಲ್ಲ, ಈಗಲೂ ತಡೆಯಲಾಗದು’ ಎಂದು ಕೇಂದ್ರದ ವಿರುದ್ಧ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಇನ್ನು, ಅಬಕಾರಿ ನೀತಿ ಜಾರಿ ಪ್ರಕರಣದಲ್ಲಿ ಮನೀಶ್‌ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಮಧ್ಯಾಹ್ನ ರೂಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, 10 ದಿನಗಳ ಕಾಲ ತನ್ನ ಸುಪರ್ದಿಗೆ ಒಪ್ಪಿಸುವಂತೆ ಕೋರಲು ಸಿದ್ಧವಾಗಿದೆ. ಇದೇ ಪ್ರಕರಣದಲ್ಲಿ ಮೊದಲಿಗೆ ಫೆಬ್ರುವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ನಂತರ ಮಾರ್ಚ್‌ 9ರ ರಾತ್ರಿ ಸಿಸೋಡಿಯಾ ಅವರನ್ನು ಇ.ಡಿ ಬಂಧಿಸಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.