ಮುಂಬೈ:‘ಗೆಲುವು ನೀಡಿದ, ಮಹಾರಾಷ್ಟ್ರದ ಜನರಿಗೆ ಧನ್ಯವಾದಗಳು. ಬಿಜೆಪಿ–ಸೇನಾ ಮೈತ್ರಿ ಸರ್ಕಾರಕ್ಕೆ ಸಂಪೂರ್ಣ ಜನಾದೇಶ ದೊರೆತಿದೆ. ಮೈತ್ರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ದೊರೆತ ಮತ ಪ್ರಮಾಣ ಶೇ 26ರಷ್ಟು ಹೆಚ್ಚಾಗಿದೆ. ಗೆದ್ದ ಪಕ್ಷಗಳ ಮತಗಳಿಕೆಯ ಪ್ರಮಾಣವನ್ನು ಗಮನಿಸಿದರೆ, ಬಿಜೆಪಿ–ಸೇನಾ ಮೈತ್ರಿಯದ್ದು ಉತ್ತಮವಾಗಿದೆ. ಇದು ಜನರು ನೀಡಿರುವ ಈ ಗೆಲುವನ್ನು ಸಂಭ್ರಮಿಸುವ ಸಮಯವೇ ಹೊರತು ವಿಶ್ಲೇಷಣೆ ಮಾಡುವ ಕಾಲವಲ್ಲ. ಕಳೆದ ಚುನಾವಣೆಯಲ್ಲಿ 260 ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಿದ್ದೆವು. ಈ ಬಾರಿ 150 ಸ್ಥಾನಗಳಲ್ಲಿ ಸ್ಪರ್ಧಿಸಿ 105 ಸ್ಥಾನಗಳಲ್ಲಿ ಗೆಲುವು ಪಡೆದಿದ್ದೇವೆ’ ಎಂದು ಹೇಳಿದರು.
ಬಿಜೆಪಿ ಹಿನ್ನಡೆ ಅನುಭವಿಸಿದ ಎರಡು ಕ್ಷೇತ್ರಗಳ ಬಗ್ಗೆ ಮಾತನಾಡಿದ ಅವರು, ‘ಅಚ್ಚರಿಯ ಫಲಿತಾಂಶ ಅದಾಗಿದೆ’ ಎಂದು ಹೇಳಿದರು. ಸತಾರ ಹಾಗೂ ಪರ್ಲಿ ಕ್ಷೇತ್ರದಲ್ಲಿ ಬಿಜೆಪಿ ಸೋತಿದೆ. ಪಂಕಜಾ ಮುಂಡೆ ಗೆಲುವು ಸಾಧಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ಬಂಡಾಯ ಅಭ್ಯರ್ಥಿಗಳಿಂದಾಗಿ ಸೋಲು ಕಾಣುವಂತಾಯಿತು’ ಎಂದರು.
‘15 ಬಂಡಾಯ ಶಾಸಕರು ನನ್ನನ್ನು ಅಲುಗಾಡಿಸಲು ಯತ್ನಿಸಿ ವಿಫಲರಾಗಿದ್ದಾರೆ. ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಸರ್ಕಾರ ಹಾಗೂ ಮುಖ್ಯಮಂತ್ರಿ ಸತತ ಎರಡನೇ ಅವಧಿಗೂ ಅಧಿಕಾರಕ್ಕೆ ಬರುತ್ತಿರುವುದು ಇದೇ ಮೊದಲು’ ಎಂದು ಖುಷಿ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.