ADVERTISEMENT

ಸೇನಾ ಕೋಟೆಯಾದ ಶ್ರೀನಗರ: ಆತಂಕ ತೀವ್ರ

ಆಯಕಟ್ಟಿನ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ

ಪಿಟಿಐ
Published 4 ಆಗಸ್ಟ್ 2019, 19:45 IST
Last Updated 4 ಆಗಸ್ಟ್ 2019, 19:45 IST
ಕಾಶ್ಮೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಸಂಗ್ರಹಿಸಿಇಟ್ಟುಕೊಳ್ಳಲು ಜನರು ಮುಂದಾಗಿದ್ದಾರೆ. ವಿತರಣಾ ಕೇಂದ್ರಗಳ ಬಳಿ ಸಿಲಿಂಡರ್ ಬದಲಿಸಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಶ್ರೀನಗರದ ವಿತರಣಾ ಕೇಂದ್ರವೊಂದರ ಬಳಿ ಸಿಲಿಂಡರ್‌ಗಳನ್ನು ಜೋಡಿಸಿಟ್ಟು, ತಮ್ಮ ಸರದಿಗಾಗಿ ಜನರು ಕಾಯುತ್ತಿದ್ದರು –ಪಿಟಿಐ ಚಿತ್ರ
ಕಾಶ್ಮೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಸಂಗ್ರಹಿಸಿಇಟ್ಟುಕೊಳ್ಳಲು ಜನರು ಮುಂದಾಗಿದ್ದಾರೆ. ವಿತರಣಾ ಕೇಂದ್ರಗಳ ಬಳಿ ಸಿಲಿಂಡರ್ ಬದಲಿಸಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಶ್ರೀನಗರದ ವಿತರಣಾ ಕೇಂದ್ರವೊಂದರ ಬಳಿ ಸಿಲಿಂಡರ್‌ಗಳನ್ನು ಜೋಡಿಸಿಟ್ಟು, ತಮ್ಮ ಸರದಿಗಾಗಿ ಜನರು ಕಾಯುತ್ತಿದ್ದರು –ಪಿಟಿಐ ಚಿತ್ರ   

ಶ್ರೀನಗರ: ಕಾಶ್ಮೀರದಲ್ಲಿ ವಾರದ ಹಿಂದೆ ಜಮೆ ಮಾಡಿರುವ ಭದ್ರತಾ ಸಿಬ್ಬಂದಿಯನ್ನು ಭಾನುವಾರ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ.ಶ್ರೀನಗರದ ಎಲ್ಲಾ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದೆ. ಶ್ರೀನಗರಕ್ಕೆ ಪ್ರವೇಶ ಪಡೆಯುವ ಮತ್ತು ಹೊರಹೋಗುವ ಎಲ್ಲಾ ರಸ್ತೆಗಳಲ್ಲಿ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ.

ಇದರಿಂದ ಆತಂಕಗೊಂಡಿರುವ ಜನರು ಭಾನುವಾರವೂ ಮಾರುಕಟ್ಟೆಗಳಲ್ಲಿ ಖರೀದಿಗೆ ಮುಂದಾಗಿದ್ದಾರೆ.ದಿನಸಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಜನರ ಸಂಖ್ಯೆ ಕಡಿಮೆಯಾಗಿಲ್ಲ. ಕಾಶ್ಮೀರದ ಹಲವೆಡೆ ಪೆಟ್ರೋಲ್‌ ಬಂಕ್‌ಗಳ ಎದುರು ಜನರ ಸರತಿ ಭಾನುವಾರವೂ ಕಂಡುಬಂತು. ಇದರ ಮಧ್ಯೆಯೇ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ನಾಯಕರು ಸಭೆ ನಡೆಸಿದ್ದಾರೆ.

ಕಾಶ್ಮೀರದಲ್ಲಿರುವ ಸರ್ಕಾರಿ ಕಚೇರಿಗಳು, ವಿದ್ಯುತ್ ನಿರ್ವಹಣಾ ಕೇಂದ್ರ, ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.ಪಾಕ್‌ ಆಕ್ರಮಿತ ಕಾಶ್ಮೀರವನ್ನು ಕಾಶ್ಮೀರದಿಂದ ಬೇರ್ಪಡಿಸುವ ಗಡಿ ನಿಯಂತ್ರಣಾ ರೇಖೆಯ (ಎಲ್‌ಒಸಿ) ಉದ್ದಕ್ಕೂ ಇರುವ ಗಡಿಠಾಣೆಗಳಲ್ಲಿ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಗಡಿ ಮತ್ತು ಎಲ್‌ಒಸಿಯಲ್ಲಿ ಗಸ್ತನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಮತ್ತು ಬಸ್‌ ನಿಲ್ದಾಣಗಳಲ್ಲಿ ಭದ್ರತೆ ಮತ್ತು ಕಣ್ಗಾವಲನ್ನು ಹೆಚ್ಚಿಸಲಾಗಿದೆ. ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ವಾಹನಗಳನ್ನು ಸನ್ನಧವಾಗಿ ನಿಲ್ಲಿಸಲಾಗಿದೆ. ಎಂಥಹದ್ದೇ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯಲ್ಲಿ ತಾಲೀಮಿನಲ್ಲಿದ್ದ 100ಕ್ಕೂ ಹೆಚ್ಚು ಕ್ರಿಕೆಟಿಗರಿಗೆ, ಕಾಶ್ಮೀರದಿಂದ ಹೊರಹೋಗುವಂತೆ ಸೂಚನೆ ನೀಡಲಾಗಿದೆ. 16 ವರ್ಷದ ಒಳಗಿನವರ ಮತ್ತು 19 ವರ್ಷದ ಒಳಗಿನವರ ತಂಡಗಳು ಹಾಗೂ ಜಮ್ಮು–ಕಾಶ್ಮೀರ ರಾಜ್ಯ ಕ್ರಿಕೆಟ್ ತಂಡವು ತಾಲೀಮನ್ನು ರದ್ದುಪಡಿಸಿ, ರಾಜ್ಯದಿಂದ ಹೊರಹೋಗಲು ಸಿದ್ಧತೆ ನಡೆಸಿವೆ.

ಬಹುತೇಕ ಶೈಕ್ಷಣಿಕ ಸಂಸ್ಥೆಗಳು ತರಗತಿಗಳನ್ನು ರದ್ದುಪಡಿಸಿವೆ. ಕಾಶ್ಮೀರದಲ್ಲಿರುವ ವಿದ್ಯಾರ್ಥಿನಿಲಯಗಳಿಂದ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ.

***

ಅಮರನಾಥ ಯಾತ್ರೆ ಸ್ಥಗಿತಗೊಳಿಸಲು ಪ್ರಬಲ ಕಾರಣವಿದೆ. ದೇಶದಲ್ಲಿ ಮಹತ್ತರವಾದುದು ಏನೋ ಒಂದು ಘಟಿಸಲಿದೆ. ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ ನಡೆದಿದೆ

-ಸಾಧ್ವಿ ಪ್ರಾಚಿ, ವಿಶ್ವ ಹಿಂದೂ ಪರಿಷತ್ ನಾಯಕಿ

***

* ಮೋಟರ್‌ ಸೈಕಲ್‌ ಮೂಲಕಕಾಶ್ಮೀರಕ್ಕೆ ಪ್ರವೇಶಿಸಲು ಮುಂದಾದ ಪ್ರವಾಸಿಗರನ್ನುಪೊಲೀಸರು ತಡೆದಿದ್ದಾರೆ. ದೇಶದ ಬೇರೆ ಬೇರೆ ಕಡೆಗಳಿಂದ ಜಮ್ಮು ಮತ್ತು ಕಾಶ್ಮೀರದ ಲಡಾಕ್‌ ಪ್ರಾಂತಕ್ಕೆ ಪ್ರವಾಸ ಹೋಗಲು ಬಂದಿದ್ದ ಹಲವು ಬೈಕ್‌ ಸವಾರರನ್ನು ಶ್ರೀನಗರದ ಹೊರವಲಯದಲ್ಲೇ ತಡೆಯಲಾಗಿದೆ. ಅವರೆಲ್ಲರನ್ನೂ ಕಾಶ್ಮೀರದಿಂದ ವಾಪಸ್ ಕಳುಹಿಸಲಾಗಿದೆ

*ಜಮ್ಮು, ಕತಾರಾ ಮತ್ತು ಉಧಂಪುರ ರೈಲು ನಿಲ್ದಾಣಗಳಿಂದ ಹೊರಡುವ ರೈಲುಗಳಲ್ಲಿ ಕಾಯ್ದಿರಿಸಲಾಗಿದ್ದ ಟೆಕೆಟ್‌ಗಳ ರದ್ದತಿ ಶುಲ್ಕವನ್ನು ರೈಲ್ವೆ ಇಲಾಖೆ ರದ್ದು ಮಾಡಿದೆ. ದೇಶದ ಬೇರೆ ಸ್ಥಳಗಳಿಂದ ಈ ಮೂರು ನಿಲ್ದಾಣಗಳಿಗೆ ಹೋಗುವ ರೈಲುಗಳ ಪ್ರಯಾಣಿಕರಿಗೂ ಈ ವಿನಾಯಿತಿ ಅನ್ವಯವಾಗಲಿದೆ

* ಶ್ರೀನಗರದ ಎಲ್ಲಾ ಹೋಟೆಲುಗಳಲ್ಲಿ ಇದ್ದ ಪ್ರವಾಸಿಗರನ್ನು ಪೊಲೀಸರು ಖಾಲಿ ಮಾಡಿಸಿದ್ದಾರೆ. ಹೊಸದಾಗಿ ಪ್ರವಾಸಿಗರಿಗೆ ಕೊಠಡಿ ನೀಡದಂತೆ ಸೂಚನೆ ನೀಡಿದ್ದಾರೆ

* ರಾಜ್ಯದಲ್ಲಿದ್ದ ಬಹುತೇಕ ಎಲ್ಲಾ ಪ್ರವಾಸಿಗರು ಭಾನುವಾರ ಸಂಜೆಯ ವೇಳೆಗೆ ರಾಜ್ಯದಿಂದ ಹೊರಹೋಗಿದ್ದಾರೆ.ಯಾವುದೇ ಸಾರಿಗೆ ವ್ಯವಸ್ಥೆ ಸಿಗದೆ ರಾಜ್ಯದಲ್ಲೇ ಉಳಿದಿದ್ದ 326 ಪ್ರವಾಸಿಗರನ್ನು ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಹೊರರಾಜ್ಯಗಳ ವಿಮಾನ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗಿದೆ

*ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಅವರು ತಮ್ಮ ಪಕ್ಷದ ನಾಯಕರ ಜತೆ ಸಭೆ ನಡೆಸಿದ್ದಾರೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ತಮ್ಮ ಪಕ್ಷದ ನಾಯಕರು, ಪ್ರತ್ಯೇಕತಾವಾದಿ ನಾಯಕರ ಜತೆ ಸಭೆ ನಡೆಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.