ADVERTISEMENT

ಐಎಎಸ್‌ ಅಧಿಕಾರಿ ಪತ್ನಿಗೆ ₹ 46 ಲಕ್ಷ ಸಂದಾಯ: ಕಿರೀಟ್‌ ಆರೋಪ

ಮುಂಬೈ ಜಾಹೀರಾತು ಫಲಕ ಉರುಳಿದ ಪ್ರಕರಣ

ಪಿಟಿಐ
Published 23 ಜೂನ್ 2024, 15:47 IST
Last Updated 23 ಜೂನ್ 2024, 15:47 IST
ಕಿರೀಟ್‌ ಸೋಮಯ್ಯ
ಕಿರೀಟ್‌ ಸೋಮಯ್ಯ    

ಮುಂಬೈ: ಇಲ್ಲಿಯ ಛೇಡಾ ನಗರದ ಘಾಟ್ಕೋಪರ್‌ನಲ್ಲಿ ಜಾಹೀರಾತು ಫಲಕ ಕುಸಿದು 17 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಕಿರೀಟ್‌ ಸೋಮಯ್ಯ, ‘ಫಲಕ ಅಳವಡಿಸಲು ಅನುಮತಿ ಪಡೆಯುವ ಸಲುವಾಗಿ ಜಾಹೀರಾತು ಕಂಪನಿ ನಿರ್ದೇಶಕ ಭಾವೇಶ್‌ ಭಿಂಡೆ ಅಂದಿನ ರೈಲ್ವೆ ಪೊಲೀಸ್‌ ಆಯುಕ್ತರ ಪತ್ನಿಗೆ ₹46 ಲಕ್ಷ ಲಂಚ ನೀಡಿದ್ದ’ ಎಂದು ಆರೋಪಿಸಿದ್ದಾರೆ.

‘ಎಕ್ಸ್‌’ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು, ಘಾಟ್ಕೋಪರ್‌ ಮತ್ತು ದಾದರ್‌ ಪ್ರದೇಶಗಳಲ್ಲಿ ಎರಡು ಡಜನ್‌ ಜಾಹೀರಾತು ಫಲಕಗಳನ್ನು ಅಳವಡಿಸಲು ರೈಲ್ವೆ ಪೊಲೀಸರು ಮತ್ತು ಬೃಹನ್‌ಮುಂಬೈ ನಗರ ಪಾಲಿಕೆಯ (ಬಿಎಂಸಿ) ಹಲವು ಅಧಿಕಾರಿಗಳಿಗೆ ಸುಮಾರು ₹5 ಕೋಟಿ ಲಂಚವನ್ನು ಈಗೊ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ (ಭಿಂಡೆ ನಿರ್ದೇಶಕನಾಗಿದ್ದ ಸಂಸ್ಥೆ) ನೀಡಿದೆ ಎಂದೂ ಅರೋಪಿಸಿದ್ದಾರೆ.

ಈ ಕುರಿತು ಮಾಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿರುವ ಅವರು, ಘಾಟ್ಕೋಪರ್‌ ಜಾಹೀರಾತು ಫಲಕಕ್ಕೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಅಂದಿನ ಸರ್ಕಾರಿ ರೈಲ್ವೆ ಪೊಲೀಸ್‌ ಆಯುಕ್ತ ಖೈಸೆರ್‌ ಖಾಲಿದ್‌ ಅವರನ್ನು ಅಮಾನತು ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ADVERTISEMENT

ಜಾಹೀರಾತು ಹೋರ್ಡಿಂಗ್‌ ಕುಸಿದ ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಲಾಗಿದೆ. ರೈಲ್ವೆ ಪೊಲೀಸರು ಮತ್ತು ಬಿಎಂಸಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವರೇ ಎದುರು ನೋಡಲಾಗುತ್ತಿದೆ ಎಂದು ಕಿರೀಟ್‌ ಹೇಳಿದ್ದಾರೆ.

ಈ ಪ್ರಕರಣವು ಮೇ 13ರಂದು ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.