ADVERTISEMENT

ಮುಂಬೈ: ಜಾಹೀರಾತು ಫಲಕ ಬಿದ್ದ ಸ್ಥಳದಲ್ಲಿ ಮತ್ತೆರಡು ಶವ ಪತ್ತೆ

ಮುಂಬೈ ಅವಘಡದಲ್ಲಿ ಶವಗಳನ್ನು ಹೊರ ತೆಗೆಯಲು ವಿಪತ್ತು ನಿರ್ವಹಣಾ ಪಡೆಯ ಹರಸಾಹಸ

ಪಿಟಿಐ
Published 15 ಮೇ 2024, 14:15 IST
Last Updated 15 ಮೇ 2024, 14:15 IST
<div class="paragraphs"><p>ಜಾಹೀರಾತು ಫಲಕದ ಕೆಳಗೆ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ</p></div>

ಜಾಹೀರಾತು ಫಲಕದ ಕೆಳಗೆ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ

   

ಮುಂಬೈ: ಮುಂಬೈನ ಛೇಡಾ ನಗರ ಪ್ರದೇಶದಲ್ಲಿ ಬಿರುಗಾಳಿ ಹಾಗೂ ಮಳೆಗೆ ಉರುಳಿದ ಬೃಹತ್‌ ಜಾಹೀರಾತು ಫಲಕದ ಅವಶೇಷಗಳ ಅಡಿ ಮತ್ತೆರಡು ಶವಗಳು ಪತ್ತೆಯಾಗಿವೆ. ಘಟನೆ ನಡೆದ 40 ಗಂಟೆಗಳ ನಂತರವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಘಟನಾ ಸ್ಥಳ ಘಾಟ್‌ಕೋಪರ್‌ನಲ್ಲಿ ಮಂಗಳವಾರ ಶವಗಳು ಪತ್ತೆಯಾಗಿವೆ. ಆದರೆ, ಇನ್ನೂ ಹೊರತೆಗೆಯಲು ಆಗಿಲ್ಲ ಎಂದು ಹೇಳಿದ್ದಾರೆ. 

ADVERTISEMENT

‘ಜಾಹೀರಾತು ಫಲಕದ 3ನೇ ಗರ್ಡರ್‌ನ ಅವಶೇಷಗಳಡಿ ಸಿಲುಕಿರುವ ಮತ್ತೆರಡು ಶವಗಳನ್ನು ನಾವು ಪತ್ತೆ ಮಾಡಿದ್ದೇವೆ. ಆದರೆ, ಅವಶೇಷದ ಸ್ಥಳವನ್ನು ತಲುಪಲು ತುಂಬಾ ಅಡಚಣೆಗಳು ಇವೆ. ಅಲ್ಲಿಗೆ ನಾವು ತೆವಳಿಕೊಂಡೇ ಹೋಗಬೇಕಿದೆ’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಸಹಾಯಕ ಕಮಾಂಡೆಂಟ್ ನಿಖಿಲ್ ಮುಧೋಲ್ಕರ್ ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ರಾತ್ರೋರಾತ್ರಿ ಮೊದಲ ಗರ್ಡರ್ ತೆಗೆದಿದ್ದು, ಈಗ ಜೆಸಿಬಿ ಯಂತ್ರಗಳ ಮೂಲಕ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಈಗ ಎರಡನೇ ಗರ್ಡರ್ ಅನ್ನು ಕತ್ತರಿಸಲಿದ್ದಾರೆ. ಇಂತಹ ಐದಕ್ಕೂ ಹೆಚ್ಚು ಗರ್ಡರ್‌ಗಳು ಅವಘಡ ನಡೆದಿರುವ ಸ್ಥಳದಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಅವಶೇಷಗಳಡಿ ಇನ್ನೆಷ್ಟು ಎಷ್ಟು ಮಂದಿ ಸಿಕ್ಕಿಬಿದ್ದಿದ್ದಾರೆ ಎಂಬುದು ಗರ್ಡರ್‌ಗಳನ್ನು ತೆರವುಗೊಳಿಸದ ನಂತರ ಗೊತ್ತಾಗಲಿದೆ. ಬುಧವಾರ ಬೆಳಿಗ್ಗೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಸ್ಥಳದಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತು. ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸಿದರು ಎಂದು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಸಂಜೆ ನಗರದಲ್ಲಿ ದೂಳಿನ ಬಿರುಗಾಳಿ ಮತ್ತು ಅಕಾಲಿಕ ಮಳೆಯಿಂದಾಗಿ, ಛೇಡಾ ನಗರ ಪ್ರದೇಶದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸ್ವಾಧೀನದ ಜಾಗದಲ್ಲಿ ಅಕ್ರಮವಾಗಿ ಅಳವಡಿಸಿದ್ದ ಬೃಹತ್‌ ಜಾಹೀರಾತು ಫಲಕ ಕುಸಿದು ಪೆಟ್ರೋಲ್ ಪಂಪ್‌ ಮೇಲೆ ಬದ್ದಿತ್ತು. ರಕ್ಷಣಾ ತಂಡದವರು, ಕುಸಿದ ಜಾಹೀರಾತು ಫಲಕದ ಅವಶೇಷಗಳಡಿಯಿಂದ ಈ ಮೊದಲು 89 ಜನರನ್ನು ಹೊರತೆಗೆದಿದ್ದರು. ಇವರಲ್ಲಿ 14 ಜನರು ಮೃತಪಟ್ಟಿದ್ದಾರೆ. ಇತರ 75 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆಗಳಿದ್ದು, ಇನ್ನೂ ಹೆಚ್ಚಿನ ಶವಗಳನ್ನು ಹೊರತೆಗೆಯುವ ಸಾಧ್ಯತೆ ಕ್ಷೀಣಿಸಿದೆ ಎಂದೂ ಹೇಳಿದ್ದಾರೆ. 

ಮುಂಬೈ ಮಹಾನಗರ ಪಾಲಿಕೆಯು ನಗರಾದ್ಯಂತ ಇರುವ 40 ಅಡಿ ಉದ್ದ ಹಾಗೂ 40 ಅಡಿ ಅಗಲಕ್ಕೂ ಹೆಚ್ಚು ಬೃಹತ್ತಾದ ಫಲಕಗಳನ್ನೆಲ್ಲ ತೆರವುಗೊಳಿಸಲು ಆದೇಶಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.