ಜೈಪುರ: ಭಾರತದ ವಿಮಾನಯಾನ ಸಂಸ್ಥೆಗಳಿಗೆ ಬರುವ ಹುಸಿ ಬಾಂಬ್ ಬೆದರಿಕೆಯ ಸರಣಿ ಮುಂದುವರಿದಿದೆ. ದುಬೈ–ಜೈಪುರ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಜೈಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ಮುಂಜಾನೆ ತುರ್ತು ಲ್ಯಾಂಡ್ ಆಗಿದೆ. ಇ–ಮೇಲ್ ಮೂಲಕ ಬೆದರಿಕೆ ಬಂದಿದ್ದು, ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಬಂದ ಕೂಡಲೇ ಜೈಪುರ ಏರ್‌ಪೋರ್ಟ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ವಿಮಾನದಲ್ಲಿ 189 ಮಂದಿ ಪ್ರಯಾಣಿಕರಿದ್ದರು. ಮುಂಜಾನೆ 1.20ರ ವೇಳೆಗೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಬಂದ ಸರಣಿ ಬಾಂಬ್ ಬೆದರಿಕೆಗಳಲ್ಲಿ ಇದು ಇತ್ತೀಚಿನದಾಗಿದೆ. ಹೆಚ್ಚಿನ ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಬಂದಿವೆ. ಆದರೆ ಅವುಗಳೆಲ್ಲವೂ ಸುಳ್ಳು ಎಂದು ತಿಳಿದುಬಂದಿದೆ.
ಈ ವಾರ 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು, ವಿಮಾನಗಳ ಮಾರ್ಗ ಬದಲಾವಣೆ ಹಾಗೂ ಸಮಯ ಮರುನಿಗದಿಗೆ ಕಾರಣವಾಗಿದೆ. ಭದ್ರತಾ ಪಡೆಗಳನ್ನು ಗಾಬರಿಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.