ADVERTISEMENT

ಅಣ್ಣನ ಜತೆ ವಿವಾದ: ಗೂಗಲ್ ಕಚೇರಿಗೆ ಹುಸಿ ಬಾಂಬ್ ಕರೆ ಮಾಡಿ ಸಿಕ್ಕಿಬಿದ್ದ ತಮ್ಮ

ಪಿಟಿಐ
Published 13 ಫೆಬ್ರುವರಿ 2023, 9:18 IST
Last Updated 13 ಫೆಬ್ರುವರಿ 2023, 9:18 IST
ಗೂಗಲ್
ಗೂಗಲ್    

ಪುಣೆ: ತನ್ನ ಅಣ್ಣನ ಜೊತೆ ಆಸ್ತಿ ವಿವಾದ ಹೊಂದಿದ್ದ ಯುವಕನೊಬ್ಬ ಅಣ್ಣ ಕೆಲಸ ಮಾಡುತ್ತಿದ್ದ ಗೂಗಲ್ ಕಚೇರಿಗೆ ಹುಸಿ ಬಾಂಬ್ ಕರೆ ಮಾಡಿ ಸಿಕ್ಕಿಬಿದ್ದಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆ ಪೊಲೀಸರು ಹೈದರಾಬಾದ್‌ನಲ್ಲಿ ಸೋಮವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿ ಪುಣೆಗೆ ಕರೆದೊಯ್ದಿದ್ದಾರೆ. ಆತನ ಹೆಸರನ್ನು ಬಹಿರಂಗಪಡಿಸಿಲ್ಲ.

ಭಾನುವಾರ ರಾತ್ರಿ 11ಕ್ಕೆ ‍ಗೂಗಲ್‌ನ ಪುಣೆ ಕಚೇರಿಗೆ ಕರೆ ಮಾಡುವ ಭರದಲ್ಲಿ ಮುಂಬೈ ಗೂಗಲ್ ಕಚೇರಿಗೆ ಕರೆ ಮಾಡಿದ್ದ ಆರೋಪಿ, ನಿಮ್ಮ ಕಚೇರಿಯಲ್ಲಿ ಭಾರಿ ಸ್ಪೋಟಕ ಇಟ್ಟಿದ್ದೇವೆ ಎಂದು ಹೆದರಿಸಿದ್ದಾನೆ. ಈ ಮಾಹಿತಿಯನ್ನು ಮುಂಬೈ ಗೂಗಲ್ ಕಚೇರಿ ಸಿಬ್ಬಂದಿ ಪುಣೆ ಪೊಲೀಸರಿಗೆ ತಿಳಿಸಿದ್ದರು.

ADVERTISEMENT

ಬಳಿಕ ಎಚ್ಚೆತ್ತುಕೊಂಡ ಪುಣೆ ಪೊಲೀಸರು, ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿರುವ ಗೂಗಲ್ ಕಚೇರಿಯಲ್ಲಿ ತಪಾಸಣೆ ಮಾಡಿದ್ದಾರೆ. ಬಳಿಕ ಇದೊಂದು ಹುಸಿ ಬಾಂಬ್ ಕರೆ ಆಗಿತ್ತು ಎಂದು ಆರೋಪಿ ಬಂಧನಕ್ಕೆ ಜಾಲ ಬೀಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುಣೆ ಡಿಸಿಪಿ ಅಮೋಲ್ ಜೇಂಡೆ ಅವರು, ಆರೋಪಿ ವಿರುದ್ಧ ಬಾಂದ್ರಾ ಕುರ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈತ ತನ್ನ ಅಣ್ಣನ ಜೊತೆ ತೆಲಂಗಾಣದಲ್ಲಿ ಆಸ್ತಿ ವಿವಾದ ಹೊಂದಿದ್ದಾನೆ. ಹೀಗಾಗಿ ಅಣ್ಣನಿಗೆ ತೊಂದರೆ ಕೊಡಲು ಹೀಗೆ ಮಾಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.