ADVERTISEMENT

ಹುಸಿ ಬಾಂಬ್‌ ಬೆದರಿಕೆ: ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
ಪಿಟಿಐ
Published 26 ಅಕ್ಟೋಬರ್ 2024, 16:20 IST
Last Updated 26 ಅಕ್ಟೋಬರ್ 2024, 16:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಬಾಂಬ್‌ ಬೆದರಿಕೆಯಂತಹ ಸಂದೇಶಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಶನಿವಾರ ಸೂಚಿಸಿರುವ ಕೇಂದ್ರ ಸರ್ಕಾರ, ತಪ್ಪಿದಲ್ಲಿ ಅನ್ಯವ್ಯಕ್ತಿಗಳು ಕಳುಹಿಸುವ ಸಂದೇಶಗಳಿಗೆ ಇದ್ದ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.    

ಕೆಲ ದಿನಗಳಿಂದ ಭಾರತೀಯ ವಿಮಾನಯಾನ ಸಂಸ್ಥೆಗಳ ಹಲವು ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕುರಿತು ಎಚ್ಚರಿಕೆ ರವಾನಿಸಿದೆ.

ADVERTISEMENT

‘ಫೇಸ್‌ಬುಕ್‌’ ಮತ್ತು ‘ಎಕ್ಸ್‌’ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸಲಹೆ ನೀಡಿರುವ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಸಚಿವಾಲಯವು, ‘ಸಾಮಾಜಿಕ ಮಾಧ್ಯಮಗಳು ತಮ್ಮ ವೇದಿಕೆಗಳಲ್ಲಿ, ಹುಸಿ ಬಾಂಬ್‌ ಬೆದರಿಕೆ ಸೇರಿದಂತೆ ದುರುದ್ದೇಶಪೂರಿತ ಕೃತ್ಯಗಳ ಸಂದೇಶಗಳ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದೆ. 

ಬಾಂಬ್‌ ಬೆದರಿಕೆ ಸೇರಿದಂತೆ ಕಾನೂನುಬಾಹಿರ ಕೃತ್ಯಗಳ ಕುರಿತ ಸಂದೇಶಗಳನ್ನು ಈ ವೇದಿಕೆಗಳು 2021ರ ಐಟಿ ನಿಯಮಗಳ ಅನ್ವಯ ತ್ವರಿತವಾಗಿ ತೆಗೆದುಹಾಕಬೇಕು ಮತ್ತು ಅವುಗಳ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.  

72 ಗಂಟೆಗಳಲ್ಲಿ ಮಾಹಿತಿ ನೀಡಿ: 

ತನಿಖಾ ಉದ್ದೇಶಗಳಿಗಾಗಿ, ಈ ರೀತಿಯ ಪೋಸ್ಟ್‌ಗಳು ಮತ್ತು ಅದರ ಬಳಕೆದಾರರ ಬಗ್ಗೆ 72 ಗಂಟೆಗಳೊಳಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಸರ್ಕಾರದ ಜತೆ ಮಾಹಿತಿ ಹಂಚಿಕೊಳ್ಳಬೇಕು ಎಂದೂ ಸೂಚಿಸಿದೆ.

ಇವುಗಳ ಜತೆಗೆ, ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ, ಭದ್ರತೆ ಅಥವಾ ಆರ್ಥಿಕ ಭದ್ರತೆಗೆ ಬೆದರಿಕೆ ಉಂಟುಮಾಡುವ ಉದ್ದೇಶದ ಸಂದೇಶಗಳ ಕುರಿತು ಕಡ್ಡಾಯವಾಗಿ ಸರ್ಕಾರಕ್ಕೆ ವರದಿ ಮಾಡಬೇಕು ಎಂದೂ ಸರ್ಕಾರ ತಿಳಿಸಿದೆ. 

ಯಾವುದೇ ಕಾನೂನುಬಾಹಿರ ಅಥವಾ ಸುಳ್ಳು ಮಾಹಿತಿಯನ್ನು ಬಳಕೆದಾರರು ಪೋಸ್ಟ್‌ ಮಾಡದಂತೆ, ಅದನ್ನು ಹಂಚಿಕೊಳ್ಳದಂತೆ ಮತ್ತು ಮಾರ್ಪಡಿಸದಂತೆ ಎಚ್ಚರವಹಿಸಬೇಕು. ಅಲ್ಲದೆ ಅವುಗಳನ್ನು ಸಂಗ್ರಹಿಸುವ, ಅಪ್‌ಡೇಟ್‌ ಮಾಡುವ ಬಳಕೆದಾರರ ವಿರುದ್ಧವೂ 2021ರ ಐಟಿ ನಿಯಮಗಳ ಅನ್ವಯ ಸಾಮಾಜಿಕ ಮಾಧ್ಯಮ ವೇದಿಕೆಗಳು ಅಗತ್ಯ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. 

33 ವಿಮಾನಗಳಿಗೆ ಬಾಂಬ್‌ ಬೆದರಿಕೆ

ನವದೆಹಲಿ: ಭಾರತದ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 33 ವಿಮಾನಗಳಿಗೆ ಶನಿವಾರ ಬಾಂಬ್‌ ಬೆದರಿಕೆ ಸಂದೇಶಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. 

ಈ ಮೂಲಕ 13 ದಿನಗಳಲ್ಲಿ ಒಟ್ಟಾರೆ 300ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆಗಳು ಬಂದಂತಾಗಿವೆ. ಹೆಚ್ಚಿನ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳ ಮೂಲಕವೇ ಬಂದಿವೆ. 

ಇಂಡಿಗೊ, ಏರ್‌ ಇಂಡಿಯಾ, ವಿಸ್ತಾರಾ ಸಂಸ್ಥೆಯ ತಲಾ 11 ವಿಮಾನಗಳಿಗೆ ಶನಿವಾರ ಬೆದರಿಕೆಗಳು ಬಂದಿವೆ ಎಂದು ಮೂಲಗಳು ಮಾಹಿತಿ ನೀಡಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.