ನಾಗ್ಪುರ (ಪಿಟಿಐ): ದೇಶದಾದ್ಯಂತ ವಿಮಾನಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಸರಣಿ ಪ್ರಕರಣಗಳ ಹಿಂದಿರುವ 35 ವರ್ಷದ ಶಂಕಿತ ಆರೋಪಿ ನಾಗ್ಪುರ ಪೊಲೀಸರ ಎದುರು ಶರಣಾಗಿದ್ದು, ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪೂರ್ವ ಮಹಾರಾಷ್ಟ್ರದ ಗೊಂದಿಯಾ ಜಿಲ್ಲೆಯ ಅರ್ಜುನಿ ಮೊರಗಾಂವ್‌ನ ನಿವಾಸಿ ಜಗದೀಶ್ ಶ್ರೀಯಾಮ್ ಉಯ್ಕೆ ಬಂಧಿತ ಆರೋಪಿ. ನಗರ ಪೊಲೀಸರು ತನಿಖೆಗೆ ಹಾಜರಾಗುವಂತೆ ಶಂಕಿತನಿಗೆ ನೋಟಿಸ್ ಕಳುಹಿಸಿದ್ದರು. ವಿಮಾನದ ಮೂಲಕ ನಾಗ್ಪುರಕ್ಕೆ ಬಂದ ಈತ ಗುರುವಾರ ಸಂಜೆ ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಉಯ್ಕೆ ದೆಹಲಿಯಿಂದ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಅ.21 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ಉಯ್ಕೆ ಕಳುಹಿಸಿದ್ದು ಎನ್ನಲಾದ ಇಮೇಲ್ ಬೆದರಿಕೆ ಸಂದೇಶ ದೇಶದಾದ್ಯಂತ ರೈಲ್ವೆ ನಿಲ್ದಾಣಗಳ ಭದ್ರತೆ ಹೆಚ್ಚಿಸುವಂತೆ ಮಾಡಿತು. ಈತ 2021ರಲ್ಲೂ ಇದೇ ರೀತಿ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ. ಬಿಡುಗಡೆಯಾದ ನಂತರ ಅರ್ಜುನಿ ಮೊರಗಾಂವ್ ತೊರೆದು, ದೆಹಲಿಗೆ ವಾಸ್ತವ್ಯ ಬದಲಿಸುವುದಾಗಿ ತನ್ನ ಆಪ್ತ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
‘ಡಿಸಿಪಿ ಶ್ವೇತಾ ಖೇಡ್ಕರ್ ನೇತೃತ್ವದ ತನಿಖಾಧಿಕಾರಿಗಳು, ವಿವಿಧ ಸಂಸ್ಥೆಗಳಿಗೆ ಬಂದಿದ್ದ ಇಮೇಲ್ ಬೆದರಿಕೆ ಸಂದೇಶಗಳನ್ನು ಆಧರಿಸಿ ಶಂಕಿತನನ್ನು ಬಂಧಿಸಿದ್ದಾರೆ. ಜಗದೀಶ್ ಶ್ರೀಯಾಮ್ ಉಯ್ಕೆ, ಪ್ರಥಮ ಪಿಯುಸಿವರೆಗೆ ಮಾತ್ರ ಓದಿದ್ದಾನೆ. ಭಯೋತ್ಪಾದನೆಯ ಕುರಿತು ‘ಆತಂಕ್‌ವಾದ್ - ಏಕ್ ತೂಫಾನಿ ರಾಕ್ಷಸ್’ ಎಂಬ ಪುಸ್ತಕ ಕೂಡ ಬರೆದಿದ್ದಾನೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಅಕ್ಟೋಬರ್ 26ರವರೆಗೆ ಹಿಂದಿನ 13 ದಿನಗಳಲ್ಲಿ, ಭಾರತೀಯ ವಿಮಾನಯಾನ ಸಂಸ್ಥೆಗಳ 300ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದರಲ್ಲಿ ಹೆಚ್ಚಿನವು ಸಾಮಾಜಿಕ ಮಾಧ್ಯಮಗಳ ಮೂಲಕ ಬಂದಿದ್ದವು. ಅ. 22 ರಂದು ಇಂಡಿಗೊ ಮತ್ತು ಏರ್ ಇಂಡಿಯಾ ಸೇರಿದಂತೆ ವಿವಿಧ ಸಂಸ್ಥೆಗಳ 50 ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.