ಆನಂದ್(ಗುಜರಾತ್): ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದ ನಾಯಿಗಳಿಗೆ ವಿಶೇಷ ಮನೆಯೊಂದನ್ನು ನಿರ್ಮಾಣ ಮಾಡಲಾಗಿದೆ.
ನಿವೃತ್ತಿಯಾದ ನಾಯಿಗಳ ಆರೋಗ್ಯ ತಪಾಸಣೆಗೆಂದು ವೈದ್ಯಕೀಯ ಸೇವೆಯನ್ನೂ ಒದಗಿಸಲಾಗುತ್ತದೆ. ಅಲ್ಲದೆ ಆಹಾರವಾಗಿ ಪ್ರತಿದಿನ 700 ಗ್ರಾಂ ಹಾಲು, 170ಗ್ರಾಂ ರೊಟ್ಟಿ, ಪ್ರತಿದಿನ ಬೆಳಿಗ್ಗೆ ಒಂದು ಮೊಟ್ಟೆ, ಸಂಜೆ ವೇಳೆ 280 ಗ್ರಾಂ ಮಟನ್ ಸೇರಿದಂತೆ ಅನ್ನ ಮತ್ತು ತರಕಾರಿಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
ನಿವೃತ್ತ ನಾಯಿಗಳಿಗೆ ಮನೆಯನ್ನು ನಿರ್ಮಿಸಿರುವುದು ದೇಶದಲ್ಲಿ ಇದೇ ಮೊದಲು. ಈ ಮನೆಯಲ್ಲಿ 23 ಕೊಠಡಿಗಳು ನಿವೃತ್ತ ನಾಯಿಗಳಿಗೆ ಹಾಗೂ 3 ಕೊಠಡಿಗಳನ್ನು ಕರ್ತವ್ಯದಲ್ಲಿ ಇರುವ ನಾಯಿಗಳಿಗೆಂದು ಮೀಸಲಿಡಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜೆ.ಜೆ.ಚೌಧರಿ ತಿಳಿಸಿದ್ದಾರೆ.
ಪ್ರತಿದಿನ ಎಲ್ಲಾ ನಾಯಿಗಳಿಗೆ ಕೆಲಹೊತ್ತು ತಾಲೀಮು ನೀಡಿ, ಆಹಾರವನ್ನು ತಿಂದ ಬಳಿಕ ಮರಳಿ ಬ್ಯಾರಕ್‌ಗಳಲ್ಲಿ ಇರಿಸಲಾಗುತ್ತದೆ. ಶನಿವಾರ ಮತ್ತು ಭಾನುವಾರ ಸಾರ್ವಜನಿಕರು ಬಂದು ನಾಯಿಗಳನ್ನು ನೋಡಲು ಅವಕಾಶವಿರುತ್ತದೆ.
ವಾರ್ಷಿಕವಾಗಿ ನಾಯಿಗಳಿಗೆ ಫಿಟ್‌ನೆಸ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅದರಲ್ಲಿ ವಿಫಲವಾದರೆ ಅಥವಾ ಕರ್ತವ್ಯದ ವೇಳೆ ಗಾಯಗೊಂಡ ನಾಯಿಗಳಿಗೆ ನಿವೃತ್ತಿ ನೀಡಿ, ಕೆಲಸಕ್ಕೆ ಅನರ್ಹವೆಂದು ಪರಿಗಣಿಸಲಾಗುತ್ತದೆ.
ಸ್ಫೋಟಕಗಳಿಗೆ ಒಡ್ಡಿಕೊಳ್ಳುವುದರಿಂದ ಕೆಲಸ ಮಾಡುವ ಪೊಲೀಸ್ ನಾಯಿಯ ಜೀವಿತಾವಧಿ ಕಡಿಮೆಯಾಗುತ್ತದೆ. ಅವು ಸಾಮಾನ್ಯವಾಗಿ 8 ರಿಂದ 10 ವರ್ಷ ವಯಸ್ಸಿನಲ್ಲಿ ನಿವೃತ್ತಿಯಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.