ADVERTISEMENT

ಜನಗಣತಿ-ಜಾತಿ ಗಣತಿ, ಮಣಿಪುರದಂತಹ ವಿಷಯಗಳ ಬಗ್ಗೆ ಅಮಿತ್ ಶಾ ಗಮನಹರಿಸಲಿ: ಖರ್ಗೆ

ಪಿಟಿಐ
Published 30 ಸೆಪ್ಟೆಂಬರ್ 2024, 11:26 IST
Last Updated 30 ಸೆಪ್ಟೆಂಬರ್ 2024, 11:26 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

(ಪಿಟಿಐ ಚಿತ್ರ)

ನವದೆಹಲಿ: ಜನಗಣತಿ, ಜಾತಿ ಗಣತಿ ಮತ್ತು ಮಣಿಪುರ ಹಿಂಸಾಚಾರದಂತಹ ಗಂಭೀರ ವಿಷಯಗಳ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗಮನ ಹರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಖರ್ಗೆ ಅವರು ನೀಡಿರುವ ಹೇಳಿಕೆಯು ಸಂಪೂರ್ಣವಾಗಿ ಅಸಹ್ಯಕರ ಮತ್ತು ಅವಮಾನಕರವಾಗಿದೆ ಎಂದು ಅಮಿತ್‌ ಶಾ ಅವರು ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, ‘ಗೃಹ ಸಚಿವ ಅಮಿತ್‌ ಶಾ ಅವರು ಜನಗಣತಿ, ಜಾತಿ ಗಣತಿ ಮತ್ತು ಮಣಿಪುರದಂತಹ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸಬೇಕು. ನಗರದ ಚರಂಡಿಗಳನ್ನು ಸ್ವಚ್ಚಗೊಳಿಸುವ ಮತ್ತು ಸೆಪ್ಟಿಕ್‌ ಟ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಶೇ 92ರಷ್ಟು ಜನರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದಿಂದ ಬಂದವರು ಎಂದು ನಿಮ್ಮ ಸರ್ಕಾರದ ಸ್ವಸಮೀಕ್ಷೆಯೇ ತಿಳಿಸಿದೆ’ ಎಂದು ಹೇಳಿದ್ದಾರೆ.

‘ಬಿಜೆಪಿ ಜಾತಿ ಗಣತಿಯನ್ನು ವಿರೋಧಿಸುತ್ತದೆ. ಏಕೆಂದರೆ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇಡಬ್ಲ್ಯೂಎಸ್‌ ಹಾಗೂ ಇತರ ಹಿಂದುಳಿದ ವರ್ಗಗಳ ಜನರು ತಮ್ಮ ಜೀವನ ನಿರ್ವಹಣೆಗಾಗಿ ಯಾವ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಏನು? ಸರ್ಕಾರಿ ಯೋಜನೆಗಳ ಯಾವ ರೀತಿಯ ಉದ್ದೇಶಿತ ಪ್ರಯೋಜನಗಳನ್ನು ಅವರು ಪಡೆದುಕೊಳ್ಳುತ್ತಿದ್ದಾರೆ ಎಂಬುದು ಅದರಿಂದ ತಿಳಿಯುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಜಮ್ಮು ಮತ್ತು ಕಾಶ್ಮೀರದ ಜಸರೋಠಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ‘ನನಗೆ ಈಗ 83 ವರ್ಷ. ನಾನು ಇಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಬದುಕಿರುತ್ತೇನೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ತಂದುಕೊಡಲು ಹೋರಾಡುತ್ತೇನೆ. ನಿಮಗೆ ಕಿವಿಯಾಗುತ್ತೇನೆ. ನಿಮಗಾಗಿ ನಾನು ಹೋರಾಡುತ್ತೇನೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.